×
Ad

‘ಹೊಸಧರ್ಮಗಳ ಉದಯ’ ಪಾಠ ಬೋಧಿಸದಂತೆ ಸುತ್ತೋಲೆ: ರಾಜ್ಯ ಸರಕಾರದ ಕ್ರಮಕ್ಕೆ ಶಿಕ್ಷಣ ತಜ್ಞರ ಆಕ್ಷೇಪ

Update: 2021-02-19 17:35 IST
ನಿರಂಜನಾರಾಧ್ಯ- ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಫೆ.19: 2020-21ನೇ ಸಾಲಿನ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ಹೊಸ ಧರ್ಮಗಳ ಉದಯ’ ಪಾಠವನ್ನು ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದರ ಬಗ್ಗೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಸೇರಿದಂತೆ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಠ್ಯಪುಸ್ತಕಗಳು ಪಕ್ಷ ಪುಸ್ತಕಗಳಲ್ಲವೆಂಬುದನ್ನು ರಾಜ್ಯ ಸರಕಾರ ಅರಿತುಕೊಳ್ಳಬೇಕು. ಪಠ್ಯದಲ್ಲಿ ತಪ್ಪು ಮಾಹಿತಿಗಳಿದ್ದರೆ ಅದರ ಪರಿಶೀಲನೆಗೆ ವಿಷಯ ತಜ್ಞರಿಗೆ ವಹಿಸಬೇಕು. ಆದರೆ, ರಾಜ್ಯ ಸರಕಾರ ‘ಹೊಸಧರ್ಮಗಳ ಉದಯ’ ಪಠ್ಯವನ್ನು ಬೋಧಿಸದಂತೆ ಆದೇಶಿಸಿರುವುದು ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

‘ಹೊಸಧರ್ಮಗಳ ಉದಯ’ ಪಠ್ಯವಿರುವ 83ನೇ ಪುಟದಲ್ಲಿ ಮುಕ್ಕಾಲು ಭಾಗ ಬೌದ್ಧ ಹಾಗೂ ಜೈನ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಯಿದೆ. ರಾಜ್ಯ ಸರಕಾರ ಈ ಪುಟವನ್ನು ಬೋಧಿಸದಂತೆ ಆದೇಶಿಸಿರುವುದು ಬುದ್ಧಗುರುವಿಗೆ ಮಾಡಿರುವ ಅವಮಾನವಾಗಿದೆ. ಇದರಿಂದ ಜೈನ, ಬೌದ್ಧ ಧರ್ಮದ ಅನುಯಾಯಿಗಳಿಗೆ ನೋವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ‘ಹೊಸಧರ್ಮಗಳ ಉದಯ’ ಪಠ್ಯ ರಚನೆ ಮಾಡಿದ ತಜ್ಞರ ಅಭಿಪ್ರಾಯ ಕೇಳದೆ ಸರಕಾರ ಏಕಾಏಕಿ ನಿರ್ಧಾರ ಕೈಗೊಳ್ಳಬಾರದು. ಈ ಪಠ್ಯವನ್ನು ರಚನೆ ಮಾಡಿದ ಉದ್ದೇಶ, ಇದರ ಸತ್ಯಾಸತ್ಯತೆಯ ಕುರಿತು ಪರಿಶೀಲಿಸಿದ ನಂತರ ನಿರ್ಧಾರ ಕೈಗೊಳ್ಳಬೇಕು. ಇಲ್ಲದೆ ಹೋದರೆ ಪಠ್ಯ ರಚನೆ ಮಾಡಿದವರ ಮೇಲೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ರಾಜ್ಯ ಸರಕಾರ ಈ ಸುತ್ತೋಲೆಯ ವಿರುದ್ಧ ಶಿಕ್ಷಣ ತಜ್ಞ ರಾಮಕೃಷ್ಣ, ಹೋರಾಟಗಾರ್ತಿ ಕೆ.ನೀಲಾ, ಲೇಖಕ ಶ್ರೀಪಾದ್ ಭಟ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ

6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪಾಠ-7 ‘ಹೊಸಧರ್ಮಗಳ ಉದಯ’ ಈ ಪಾಠದಲ್ಲಿನ ಪುಟ ಸಂಖ್ಯೆ 82, 83ರಲ್ಲಿನ ವಿಷಯಾಂಶಗಳನ್ನು 2020-21ನೇ ಶೈಕ್ಷಣಿಕ ಸಾಲಿಗೆ ಬೋಧನೆ, ಕಲಿಕೆಗೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಿರುವಂತೆ ಸಂಬಂಧಿಸಿದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News