ಮಹಾರಾಷ್ಟ್ರ ಸಿಎಂ ನಡೆ ವಿರುದ್ಧ ಕೇಂದ್ರ ಸರಕಾರ ಸೂಕ್ತ ಕ್ರಮಕ್ಕೆ ಒತ್ತಾಯ
ಬೆಂಗಳೂರು, ಫೆ.19: ಬೆಳಗಾವಿ ಸೇರಿದಂತೆ ಮರಾಠಿ ಭಾಷಾ ಪ್ರಭಾವದ ಗಡಿ ಪ್ರದೇಶಗಳನ್ನು ಗಡಿ ಸಮಸ್ಯೆ ಇತ್ಯರ್ಥವಾಗುವವರೆಗೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡಿಗರ ಸಹನೆಯನ್ನು ನಿರಂತರವಾಗಿ ಕೆಣಕುತ್ತಿರುವ ಉದ್ಧವ್ ಠಾಕ್ರೆ ಸರಕಾರಕ್ಕೆ ರಾಜ್ಯ ಸರಕಾರ ಅಧಿಕೃತವಾಗಿ ಪ್ರತಿಭಟನೆ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಸಮಾಜದ ಸ್ವಾಸ್ತ್ಯ ಕದಡುತ್ತಿರುವ ಶಿವಸೇನೆ ನೇತೃತ್ವದ ಸರಕಾರಕ್ಕೆ ಎಚ್ಚರಿಸುವಂತೆ ಮನವಿ ಸಲ್ಲಿಸಬೇಕು. ಹಾಗೂ ಮಹಾರಾಷ್ಟ್ರದ ಸರಕಾರದ ಭಾಗವಾಗಿರುವ ಕಾಂಗ್ರೆಸ್, ಶಿವಸೇನೆಯ ಪ್ರಚೋಧನಕಾರಿಯಾದ ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವ ನಿಲುವನ್ನು ತಿದ್ದಿಕೊಳ್ಳಲು ಸೂಚಿಸಬೇಕೆಂದು ಕನ್ನಡ ಗೆಳೆಯರ ಬಳಗದ ಪ್ರಕಟನೆಯ ಮೂಲಕ ಒತ್ತಾಯ ಮಾಡಿದೆ.