×
Ad

ತಮ್ಮ ಹಕ್ಕಿಗಾಗಿ ಪ್ರತಿಭಟಿಸಿಸುವ ಜನರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ: ಮಾಜಿ ಸಚಿವೆ ಮೋಟಮ್ಮ

Update: 2021-02-19 18:04 IST

ಮೂಡಿಗೆರೆ, ಫೆ.19: ದೇಶದ ಜನರು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದರೆ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಆದರೆ ಜನರಿಗೆ ಮೋಸ ಮಾಡಿ, ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ, ದೇಶದ ಅಭಿವೃದ್ಧಿ ಕಾರ್ಯಕ್ಕೆ ಒಂದು ಪೈಸೆ ಅನುದಾನ ಬಿಡುಗಡೆ ಮಾಡದ, ಕೊರೋನ ಹೆಸರಿನಲ್ಲಿ ಒಂದು ವರ್ಷ ಖಜಾನೆ ಕೊಳ್ಳೆ ಹೊಡೆದಿರುವ ಕೇಂದ್ರ ಹಾಗೂ ರಾಜ್ಯವನ್ನು ಆಳುತ್ತಿರುವರಿಗೆ ಏನನ್ನಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಪಟ್ಟಣದಲ್ಲಿ ಆಟೊ ಚಾಲಕರ ಸಂಘ, ವಿವಿಧ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಎಂದರೆ ಮೋಸದ ಸರಕಾರ. ಅವರು ಆಡಳಿತಕ್ಕೆ ಬರುವ ಮುನ್ನ ಕಪ್ಪು ಹಣ ತರುತ್ತೇವೆ, 2 ಸಾವಿರ ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ತಡೆಗಟ್ಟುತ್ತೇವೆ, ಅಚ್ಚೇದಿನ್ ಆಯೇಗಾ, ಮೇಕ್ ಇನ್ ಇಂಡಿಯಾ ಮಾಡುತ್ತೇವೆಂದು ನೂರಾರು ರೀತಿಯ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತದಿಂದಾಗಿ ಸದ್ಯ ದೇಶಕ್ಕೆ ಅಚ್ಚೇದಿನ್ ಬರುವುದಿರಲಿ, ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತೆ ಮಾಡಿದ್ದಾರೆಂದು ಆರೋಪಿಸಿದರು.

ದೇಶದ ರೈತರು ಹಾಗೂ ಜನರಿಗೆ ಬೇಡದ ಕಾಯ್ದೆಗಳು ಮೋದಿ ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಬಿಜೆಪಿಯವರಿಗೆ ಏಕೆ ಬೇಕು? ಎಂದ ಪ್ರಶ್ನಿಸಿದ ಅವರು, ಮೋದಿ ಸರಕಾರ ಕಾರ್ಪೋರೆಟ್  ಸರಕಾರವಾಗಿದ್ದು, ಅಂಬಾನಿ ಅದಾನಿಯವರ ಸರಕಾರವಾಗಿದೆ. ದೇಶದ ಸಂಪತ್ತನ್ನು ಈ ಕಾರ್ಪೋರೆಟ್ ಶಕ್ತಿಗಳಿಗೆ ಅಡ ಇಡುತ್ತಿದ್ದಾರೆ. ಈ ಕಾರಣಕ್ಕೆ ಅಂಬಾನಿ, ಅದಾನಿಗಾಗಿ ರೈತ ವಿರೋಧಿ ಕಾನೂನುಗಳನ್ನು ಬಿಜೆಪಿ ಸರಕಾರಗಳು ಜಾರಿ ಮಾಡುತ್ತಿವೆ. ಮೋದಿ ಸರಕಾರದ ಈ ಕಾರ್ಪೋರೆಟ್ ಪರವಾದ ಆಡಳಿತದಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿದ್ದು, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕಾದ ಕೇಂದ್ರ ಸರಕಾರ ಜನವಿರೋಧಿ ಆಡಳಿತ ನೀಡುತ್ತಿದೆ ಎಂದು ಟೀಕಿಸಿದರು.

ದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉತ್ತರ ಪ್ರದೇಶದ ಯೋಗಿ ರಾಜ್ಯದಲ್ಲಿ ದಲಿತ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಶೃಂಗೇರಿಯಲ್ಲಿ ಕೂಡ ಅತ್ಯಾಚಾರ ನಡೆದಿದೆ. ಈ ಬಗ್ಗೆ ಯಾವ ಬಿಜೆಪಿ ನಾಯಕರೂ ಬಾಯಿ ತೆರೆಯಲಿಲ್ಲ. ಯಾವಾಗಲೂ ಬಾಯಿ ಬಡಿದುಕೊಳ್ಳುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ನಾಪತ್ತೆಯಾಗಿದ್ದಾರೆ. ಬಿಜೆಪಿಯವರು ಜನರ ಮುಖ ತೋರಿಸುವ ಯೋಗ್ಯತೆ ಕಳೆದುಕೊಂಡಿದ್ದಾರೆಂದು ಕಿಡಿಕಾರಿದರು. 

ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಇದು ಪ್ರಜಾಪ್ರಭುತ್ವ ಸರಕಾರ ಅಲ್ಲ. ಇದು ಬಂಡವಾಳಶಾಹಿಗಳಿಗೆ ತಲೆ ಹಿಡುಕ ಸರಕಾರ. ದೇವರು, ಜಾತಿ, ಧರ್ಮ, ಭಾರತೆ ಮಾತೆಯನ್ನು ಕಾಪಾಡುತ್ತೇವೆಂದು ಭಾರತ ಮಾತೆಯನ್ನು ಕಾರ್ಪೋರೇಟರ್ ಗಳ ತಕ್ಕಡಿಯಲ್ಲಿಟ್ಟಿದ್ದಾರೆ. ದೇಶದ ಜನರಿಗೆ ಅನುಕೂಲವಾಗುವಂತಹ ಶಿಕ್ಷಣ, ಬ್ಯಾಂಕ್, ವಿಮೆ ಸೇರಿದಂತೆ 9 ರತ್ನ ಸೇವಾ ವಲಯವನ್ನು ಕಾರ್ಪೋರೇಟರ್ ಗಳಿಗೆ ಮಾರಾಟ ಮಾಡುತ್ತಿರುವ ಮೋದಿ ಸರಕಾರ ಪ್ರಜಾಪ್ರಭುತ್ವ ಸರಕಾರವೇ ಅಲ್ಲ. ಹಿಂದೆ ಯುಪಿಎ ಸರಕಾರ 44 ಲಕ್ಷ ಕೋಟಿ ಸಾಲ ಮಾಡಿತ್ತು. ಆದರೆ ಈಗಿನ ಬಿಜೆಪಿ ಸರಕಾರ 88 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರ ತೆರಿಗೆ ಹಣ ಏನು ಮಾಡಿದ್ದಾರೆಂದು ದೇಶದ ಜನರು ಪ್ರಶ್ನಿಸಬೇಕಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿ ಅದರ ಲಾಭ ಪಡೆಯುತ್ತಿರುವುದು ಸರಕಾರವಲ್ಲ, ಅದು ಕಾರ್ಪೋರೇಟರ್ ಗಳು ಎಂಬುದನ್ನು ಜನರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇನ್ನಾದರೂ ಜನರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟವಾಗುತ್ತದೆ ಎಂದು ಹೇಳಿದರು. 

ಆಟೊ ಸಂಘದ ಗೌರವ ಅಧ್ಯಕ್ಷ ಅಮರ್‍ನಾಥ್ ಮಾತನಾಡಿ, ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಎಲ್ಲಾ ವಸ್ತುಗಳಿಗೆ ಜಿಎಸ್‍ಟಿ ಹಾಕಿದ ಹಾಗೆ ಪೆಟ್ರೋಲ್, ಡೀಸಲ್‍ಗೂ ಜಿಎಸ್‍ಟಿ ಹಾಕಲಿ. ಡೀಸಲ್ ಮತ್ತು ಪೆಟ್ರೋಲ್‍ನಿಂದ ಲೀಟರ್ ಗೆ ರಾಜ್ಯ ಸರಕಾರ 33 ರೂ, ಕೇಂದ್ರ ಸರಕಾರ 36 ರೂ. ಸೇರಿದಂತೆ ಹೆಚ್ಚುವರಿಯಾಗಿ ಒಟ್ಟು 69 ರೂ. ಲೂಟಿ ಹೊಡೆಯುತ್ತಿದೆ. ಇದು ನಿಲ್ಲಬೇಕು. ಆಟೊ ಚಾಲಕರಿಗೆ ವಿಮೆ, ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು. 

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೋವೊಂದನ್ನು ಹಗ್ಗದಲ್ಲಿ ಎಳೆದು ತರುವ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ.ಪಂ. ಸದಸ್ಯ ಎಚ್.ಪಿ.ರಮೇಶ್, ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಕರವೇ ಅಧ್ಯಕ್ಷ ಪ್ರಸನ್ನ, ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ, ಕರ್ನಾಟಕ ಟ್ಯಾಕ್ಸಿ ಡೈವರ್ ಆರ್ಗನೈಜೇಷನ್ ಜಿಲ್ಲಾಧ್ಯಕ್ಷ ಪ್ರಕಾಶ್, ಸ್ವತಶ್ವಲಿ ಆಟೊ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಇಮ್ತಿಯಾಜ್, ಸ್ವಾಭಿಮಾನಿ ಆಟೊ ಚಾಲಕರ ಸಂಘದ ಅಧ್ಯಕ್ಷ ಪುರುಷೋತ್ತಮ, ಮುಖಂಡರಾದ ಸುಧೀರ್, ನಾಗೇಶ್, ಸತೀಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News