ದಿಶಾ ರವಿ ಬಂಧನ ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಮೌನ ಪ್ರತಿಭಟನೆ

Update: 2021-02-19 13:12 GMT

ಮೈಸೂರು,ಫೆ.19: ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನ ಖಂಡಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು ದಿಶಾ ರವಿಗೆ ಬೆಂಬಲ ವ್ಯಕ್ತಪಡಿಸಿದ ಪ್ಲೇಕಾರ್ಡ್ ಹಿಡಿದು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವೇ ಸರ್ವಶ್ರೇಷ್ಠ ಧರ್ಮ ಗ್ರಂಥ ಎಂದು ಹೇಳುತ್ತಾರೆ. ಹಾಗಿದ್ದ ಮೇಲೆ ಸಂವಿಧಾನ ಹೇಳಿದ ನೀತಿ, ತತ್ವ ಮತ್ತು ತತ್ವಗಳನ್ನು ಏಕೆ ಪಾಲನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ನಮ್ಮ ರೈತರು ಯಾವುದೇ ತಪ್ಪು ಮಾಡಿಲ್ಲ. ಆದರೆ ಅವರಿಗೆ ವಿರೋಧವಾದ ಕಾನೂನುಗಳನ್ನು ಏಕೆ ಜಾರಿ ಮಾಡುತ್ತಿದ್ದೀರಿ. ರೈತರಿಗೆ ಬೇಡ ಎಂದ ಮೇಲೆ ನಿಮಗೆ ಏಕೆ ಬೇಕು. ಅದರಿಂದ ನಿಮಗೆ ಏನು ಲಾಭ, ಇದರಿಂದ ನಿಮ್ಮ ಮೂಲಕ ಬೇರೆಯವರಿಗೆ ಲಾಭ ಮಾಡಿಕೊಡಬೇಕು ಎಂದು ಹೊರಟಿದ್ದೀರ. ದಯವಿಟ್ಟು ಈ ನಿಲುವಿನಿಂದ ಹಿಂದೆ ಸರಿಯಿರಿ ಎಂದು ಆಗ್ರಹಿಸಿದರು.

ಸಂವಿಧಾನಕ್ಕೆ ವಿರೋಧವಾದ ಇಂತಹ ಕಾಯ್ದೆಗಳು ಸರಿಯಿಲ್ಲ ಎಂದು ದಿಶಾ ರವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅದನ್ನೆ ಗುರಿಯಾಗಿಸಿಕೊಂಡ ನೀವು ಅವರು ಯಾವ ತಪ್ಪು ಅಪರಾಧವನ್ನು ಮಾಡಿರದಿದ್ದರೂ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಆಕೆಯನ್ನು ಬಂಧಿಸಿ ವಾರ ಕಳೆದರೂ ಆಕೆ ಮಾಡಿರುವ ತಪ್ಪು ಏನು ಎಂದು ಬಹಿರಂಗಪಡಿಸಿಲ್ಲ. ಆದರೂ ನೀವು ನಿಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರಿಗೆ ಕಿರುಕುಳ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ಮಾಡುತ್ತಿರುವ ತಪ್ಪನ್ನು ಜನ ನೋಡುತ್ತಿದ್ದಾರೆ. ನಿಮ್ಮ ನಡೆ ಕಂಡು ದುಖಃ ಮತ್ತು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ನಿಮಗೆ ತೊಂದರೆ ಯಾಗುವುದು ಖಚಿತ. ಮುಂದೆ ನೀವೆ ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.

ನಾವು ಯಾರಿಗಿಂತಲೂ ದೇಶ ಭಕ್ತಿಯಲ್ಲಿ ಕಡಿಮೆಯಿಲ್ಲ. ನಾವು ಅಪ್ಪಟ ದೇಶ ಪ್ರೇಮಿಗಳು. ಹಾಗಾಗಿಯೇ ಕಳೆದ ಮೂರು ತಿಂಗಳುಗಳಿಂದಲೂ ಯಾವುದೇ ಅಹಿತಕರ ಘಟನೆ ನಡೆಸದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ‌ ಎಂದು ಹೇಳಿದರು.

ಸರ್ಕಾರ ಮಾಡಿದ ತಪ್ಪುಗಳನ್ನು ಹೇಳುವುದೇ ದೊಡ್ಡ ಅಪರಾಧ ಎಂದರೆ ಹೇಗೆ. ನಾವು ಸರ್ಕಾರ ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುತ್ತೇವೆ ಎಂದರೆ ಸರ್ಕಾರ ಸಂತೋಷಪಟ್ಟು ತಪ್ಪುಗಳನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಸರ್ಕಾರದ ವಿರುದ್ಧ ಮಾತನಾಡಿದವರನ್ನೇ ಬಂಧಿಸುವುದು ಎಷ್ಟು ಸರಿ. ಕೂಡಲೇ ದಿಶಾ ರವಿಯವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಎಂ‌.ಚಂದ್ರಶೇಖರ್, ಅರಸು ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಝಾಕೀರ್ ಹುಸೇನ್, ಡೈರಿ ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಶಾಂತರಾಜು, ಜನಕ ಪರಿಸರವಾದಿ ಬಾನುಮೋಹನ್, ಎಚ್.ಕೆ.ಕೃಷ್ಣೇಗೌಡ, ನೆಲೆ ಹಿನ್ನಲೆ ಗೋಪಾಲಕೃಷ್ಣ, ದ್ಯಾವಪ್ಪ ನಾಯಕ, ಪಿ.ರಾಜು, ಶಿವಶಂಕರ್, ಪಿ.ಮಂಜುಬಾಥ್, ಜಿ.ಆರ್.ಪ್ರಶಾಂತ್, ಕಿರಣ್ ಪಿ., ಪ್ರಶಾಂತ್ ಆರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News