×
Ad

ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ವರ್ಷಧಾರೆ: ಆಲಿಕಲ್ಲು ಮಳೆಗೆ ರೈತರು ಕಂಗಾಲು

Update: 2021-02-19 20:18 IST

ಬೆಂಗಳೂರು, ಫೆ.19: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಶುಕ್ರವಾರ ಗುಡುಗು ಸಹಿತ ಅಕಾಲಿಕ ಮಳೆ ಸುರಿದಿದ್ದು, ಪ್ರಯಾಣಿಕರು, ವಾಹನ ಸವಾರರು ಕೆಲಕಾಲ ಪರದಾಡಿದರು. ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಬೆಳೆಗಾರರು ಮತ್ತೆ ಸಂಕಷ್ಟ ಎದುರಿಸುವಂತಾಯಿತು.

ಬೆಂಗಳೂರಿನ ಜೆಪಿ ನಗರ, ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಹಾಗೂ ಸುತ್ತಮುತ್ತ ಮಳೆ ಸುರಿದಿದೆ. ಸಂಜೆಯ ನಂತರ ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಹಲವೆಡೆ ಜೋರಾಗಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿದು, ವಾಹನ ಸವಾರರು ಪರದಾಡುವಂತಾಯಿತು.

ನಗರದ ವಿವಿಧೆಡೆ ರಸ್ತೆ ಮಧ್ಯೆದಲ್ಲಿಯೇ ನೀರು ಹರಿದ ಪರಿಣಾಮ, ದ್ವಿಚಕ್ರ ಸವಾರರು ತಮ್ಮ ಬೈಕ್‍ಗಳನ್ನು ಮಾರ್ಗ ಮಧ್ಯೆ ನಿಲ್ಲಿಸಲೂ ಆಗದೆ, ಚಲಾಯಿಸಲು ಆಗದೆ ಪೇಚಿಗೆ ಸಿಲುಕಿದರು. ಇದರಿಂದ ಕೆಲವೆಡೆ ವಾಹನದಟ್ಟಣೆ ಉಂಟಾಗಿತ್ತು.

ಮಂಡ್ಯ: ಜಿಲ್ಲೆಯ ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನ ಕ್ಯಾತನಹಳ್ಳಿ, ಕೆನ್ನಾಳು, ಹರಳಹಳ್ಳಿ, ಹಾರೋಹಳ್ಳಿ, ಶಂಭೂನಹಳ್ಳಿ, ಇತರೆ ಗ್ರಾಮಗಳಲ್ಲಿ ಗುರುವಾರ ಸಂಜೆ ಆಲಿಕಲ್ಲು ಮಳೆ ಸುರಿಯಿತು.

ಕೊಡಗು: ಇಲ್ಲಿನ ಶನಿವಾರಸಂತೆ, ಅಂಕನಳ್ಳಿ, ನಿಡ್ತ ಸುತ್ತಮುತ್ತಲಿನಲ್ಲಿ ಶುಕ್ರವಾರ ಗುಡುಗು ಸಹಿತ ಆಲಿಕಲ್ಲಿನ ಭಾರೀ ಮಳೆಯಾಗಿದೆ.

ಭಾರೀ ಆಲಿಕಲ್ಲಿನ ಮಳೆಯಿಂದ ಈ ಭಾಗದ ಕೆಲವೆಡೆ ಗಿಡದಲ್ಲೆ ಇರುವ ರೋಬಸ್ಟ ಕಾಫಿ ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದೆ. ಹಸಿರು ಮೆಣಸು ಕೃಷಿಯಲ್ಲಿ ತೊಡಗಿರುವ ರೈತರು ಮಳೆಯಿಂದ ಕಂಗಾಲಾಗಿದ್ದು, ಗಿಡಗಳು ಸಂಪೂರ್ಣ ಹಾನಿಯಾಗಿರುವ ಬಗ್ಗೆ ದೂರಿದ್ದಾರೆ. 

ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಶುಕ್ರವಾರ ಸಂಜೆ ಆಲಿಕಲ್ಲಿನ ಮಳೆಯಾಗಿದೆ. ಚಾಮರಾಜನಗರ ತಾಲೂಕಿನಲ್ಲಿ ಬಿರುಗಾಳಿ ಸಹಿತ ಗುಡುಗು ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನಲ್ಲಿ ಗಾಳಿ ಮಳೆಯಿಂದಾಗಿ ತೆಂಗಿನ ಮರಗಳು, ಬಾಳೆ ಗಿಡಗಳು ಧರೆಗೆ ಉರುಳಿವೆ. ಭಾರೀ ಮಳೆಯಿಂದಾಗಿ ಸಣ್ಣ ಈರುಳ್ಳಿ, ಟೊಮೆಟೊ ಸೇರಿದಂತೆ ಇತರ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.

ಚಂದಕವಾಡಿ, ನಲ್ಲೂರು, ಜ್ಯೋತಿಗೌಡನಪುರ, ಪುಟ್ಟನಪುರ ಗ್ರಾಮಗಳಲ್ಲಿ ತೆಂಗಿನಮರಗಳು, ಬಾಳೆ ಗಿಡಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಾಮಸಮುದ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ಈರುಳ್ಳಿ ಬೆಳೆಗೂ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ‌ಭಾರೀ ಮಳೆಯಿಂದಾಗಿ ಕೃಷಿ ಜಮೀನುಗಳಲ್ಲಿ ನೀರು ನಿಂತಿದ್ದು, ತೋಟಗಾರಿಕಾ ಬೆಳೆಗಳು ಕೊಳೆತು ಹೋಗುವ ಆತಂಕ ರೈತರನ್ನು ಕಾಡುತ್ತಿದೆ. ತಾಲೂಕಿನ ಕೋಡಿಮೋಳೆಯ ಬಸವನಪುರ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದೆ.

‘ಬಹುತೇಕ ಎಲ್ಲ ಕೃಷಿ ಬೆಳೆಗಳ ಕಟಾವು ಪೂರ್ಣಗೊಂಡಿರುವುದರಿಂದ ಬೆಳೆ ಹಾನಿ ಸಂಭವಿಸುವ ಸಾಧ್ಯತೆ ಇಲ್ಲ. ಆದರೆ, ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ  ತಿಳಿಸಿದರು.

ಪರಿಹಾರಕ್ಕೆ ಆಗ್ರಹ: ‘ಚಂದಕವಾಡಿ ಹೋಬಳಿಯ ಗ್ರಾಮಗಳಲ್ಲಿ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಈರುಳ್ಳಿ, ಬಾಳೆ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು ತಿಳಿಸಿದರು.

ಧರೆಗುರುಳಿದ ವಿದ್ಯುತ್‌ ಕಂಬಗಳು: ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಸಿಲುಕಿ 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ಗ್ರಾಮದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಇದಲ್ಲದೇ 15ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ.

ಜನರ ಪರದಾಟ: ಭಾರೀ ಮಳೆಯಿಂದಾಗಿ ನಗರದಲ್ಲಿ ಜನರು ಪರದಾಡಿದರು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ಇದ್ದುದರಿಂದ ಬಿ.ರಾಚಯ್ಯ ಜೋಡಿ ರಸ್ತೆ, ತ್ಯಾಗರಾಜ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತುಕೊಂಡು ಕೆರೆಯಾಗಿ ಮಾರ್ಪಟ್ಟಿತು. ಮೊಣಕಾಲಿನವರೆಗೂ ನೀರು ನಿಂತಿತ್ತು. ತಗ್ಗು ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಅಂಗಡಿ ಮಾಲಕರು ಹಾಗೂ ನಿವಾಸಿಗಳು ಪರದಾಡಿದರು.

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲಾದ್ಯಂತ ಕಾಫಿ ಬೆಳೆಗಾರರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

ಗುರುವಾರ ಮಧ್ಯರಾತ್ರಿಯಾಗುತ್ತಲೇ ಚಿಕ್ಕಮಗಳೂರು ನಗರ ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಕಡೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಮೋಡಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಶುಕ್ರವಾರ ಬೆಳಗ್ಗೆ ಚಿಕ್ಕಮಗಳೂರು ತಾಲೂಕಿನಾದ್ಯಂತ ಧಟ್ಟ ಮೋಡ ಕವಿದ ವಾತಾವರಣದೊಂದಿಗೆ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ನಗರದಲ್ಲಿ ಕೆಲ ಹೊತ್ತು ದಿಢೀರನೆ ಧಾರಾಕಾರ ಮಳೆ ಸುರಿಯಿತು. ದಿಢೀರ್ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲೆ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾರ್ವಜನಿಕರು ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ ಮತ್ತು ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಬಹುತೇಕ ಸ್ಥಳಗಳಲ್ಲಿ ಬಹುತೇಕ ಇದೇ ವಾತಾವರಣ ನಿರ್ಮಾಣವಾಗಿತ್ತು. 

ಕಾಫಿ ಕೊಯ್ಲಿಗೆ ಅಡಚಣೆ: ಜಿಲ್ಲೆಯಲ್ಲಿ ಈಗಾಗಲೇ ಅರೇಬಿಕಾ ಕಾಫಿ ಕೊಯ್ಲು ಮುಗಿದಿದ್ದು, ರೊಬಾಸ್ಟ ಕೊಯ್ಲು ಆರಂಭಗೊಂಡಿದೆ. ಮೊಡಕವಿದ ವಾತಾವರಣದಿಂದ ಕಟಾವು ಮಾಡಿರುವ ಕಾಫಿ ಒಣಗಿಸಲು ತೊಂದರೆಯಾಗಿದೆ. ಮಳೆಬಿದ್ದರೆ ಕಾಫಿ ಹಣ್ಣು ಒಡೆದು ನೆಲಕ್ಕುದುರುತ್ತಿದ್ದು, ಕಾಫಿತೊಟ್ಟು ಮಳೆಯಿಂದ ತೊಯ್ದು ಕೊಯ್ಲು ಮಾಡುವಾಗ ಹಣ್ಣುಗಳು ನೆಲಕ್ಕುದುರಿ ಬೆಳೆಗಾರರಿಗೆ ನಷ್ಟವಾಗಲಿದೆ. ಕೆಲವು ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದ ಕಾಫಿ ಕೊಯ್ಲು ಮಾಡಲಾಗದೆ ಹಣ್ಣು ಗಿಡಗಳಲ್ಲೇ ಒಣಗುತ್ತಿವೆ. ಕಾಫಿ ಹೂವಾಗಲು ಈ ಮಳೆ ಸಹಕಾರಿಯಾದರೂ ಕೊಯ್ಲು ಮುಗಿಯದೇ ಮಳೆ ಬಂದರೆ ಹಣ್ಣುಗಳ ನಡುವೆಯೇ ಕಾಫಿ ಹೂವಾಗಿ ಕೊಯ್ಲಿಗೆ ತೊಡಕಾಗುವ ಸಾಧ್ಯತೆಗಳಿವೆ. ಇಂತಹ ಅಕಾಳಿಕ ಮಳೆಯಿಂದಾಗಿ ಮುಂದಿನ ಮೂರು ವರ್ಷಗಳ ಕಾಲ ಉತ್ತಮ ಇಳುವರಿ ಸಾಧ್ಯವಿಲ್ಲ ಎಂದು ಕಾಫಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಗುರುವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಿರುಗುಂದ, ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ, ಗೋಣಿಬೀಡು, ಕಳಸ, ಸಂಸೆ, ಹೊರನಾಡು, ಕುದುರೆಮುಖ, ಬಾಳೂರು, ಜಾವಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನವೂ ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಈ ಭಾಗದಲ್ಲಿ ರೊಬಾಸ್ಟ ಕಾಫಿ ಹಾಗೂ ಅಡಿಕೆ ಕೊಯ್ಲು ನಡೆಯುತ್ತಿದ್ದು, ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿ ಗ್ರಾಮದಲ್ಲಿ ಗಣೇಶ್ ಎಂಬವರು ತಮ್ಮ ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮತ್ತೆ ಕಾಫಿ ತೋಟದ ಪಾಲಾಗಿರುವ ಬಗ್ಗೆ ವರದಿಯಾಗಿದೆ.

ಅಗುಂಬೆಯಲ್ಲೂ ಇಂದು ಸಂಜೆ ಭಾರೀ ಗಾಳಿ ಸಹಿತ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News