ಕೋವಿಡ್-19 ಸಾವಿನ ವರದಿ ತಡವಾದರೆ ಶಿಸ್ತು ಕ್ರಮ: ಬಿಬಿಎಂಪಿ ಆಯುಕ್ತ ಎಚ್ಚರಿಕೆ

Update: 2021-02-19 16:56 GMT

ಬೆಂಗಳೂರು, ಫೆ.19: ಕೋವಿಡ್-19 ಸಂಬಂಧ ಮೃತರ ವರದಿಯನ್ನು ತಡವಾಗಿ ಸಲ್ಲಿಸಿದರೆ, ಅಂತಹ ಆರೋಗ್ಯ ಸಂಸ್ಥೆ, ವೈದ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‍ಎಚ್ಚರಿಕೆ ನೀಡಿದರು.

ಶುಕ್ರವಾರ ನಗರದ ಪುರಭವನದ ಸಭಾಂಗಣದಲ್ಲಿ ಕೋವಿಡ್-19 ಸೋಂಕು ಸಂಬಂಧ ಪಾಲಿಕೆಯ ಎಲ್ಲ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ವಿವರವನ್ನು ಅದೇ ದಿನ ಕೊಡಬೇಕು. ಆದರೆ, ಕೆಲ ಆಸ್ಪತ್ರೆಗಳಲ್ಲಿ ತಡವಾಗಿ ಪಾಲಿಕೆಗೆ ವರದಿ ನೀಡುತ್ತಿದ್ದಾರೆ. ಈ ಪೈಕಿ ಯಾವ ಆಸ್ಪತ್ರೆಗಳಲ್ಲಿ ಸಾವಿನ ವರದಿ ತಡವಾಗಿ ನೀಡುತ್ತಾರೆ ಅಂತಹ ಆಸ್ಪತ್ರೆಗಳ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ ಅಡಿ ಕೂಡಲೆ ಶಿಸ್ತು ಕ್ರಮಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಾಗೃತಿ: ನಗರದಲ್ಲಿ ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈ ಸಂಬಂಧ ರೆಸಿಡೆನ್ಸಿ, ಅಪಾಟ್ಮೆರ್ಂಟ್ಸ್, ರೆಸ್ಟೋರೆಂಟ್, ಚಿತ್ರಮಂದಿರಗಳ ಬಳಿ ಕೋವಿಡ್ ನಿಯಮಗಳು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಬಿತ್ತಿಪತ್ರ, ಪೋಸ್ಟರ್ ಗಳನ್ನು ನೀಡಲು ಆರ್ ಡಬ್ಲ್ಯುಎಗಳು ಮನವಿ ಮಾಡಿವೆ. ಅಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿದರೆ ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲು ತಿಳಿಸಿದ್ದಾರೆ. ಈ ಸಂಬಂಧ ಆರೋಗ್ಯಾಧಿಕಾರಿಗಳು ಇದನ್ನು ಜಾರಿಗೊಳಿಸಬೇಕಿದ್ದು, ಕೂಡಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಿಬ್ಬಂದಿಯನ್ನು ಮುಂದುವರಿಸಿ: ಕೋವಿಡ್ ವೇಳೆ ಪರೀಕ್ಷೆ ಮಾಡಲು ನಿಯೋಜನೆ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಮಾರ್ಚ್ ಅಂತ್ಯದವರೆಗೂ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News