ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತ್ಯು ಆರೋಪ: ಸಂಬಂಧಿಕರಿಂದ ಪೊಲೀಸ್ ಠಾಣೆ ಎದುರು ಶವ ಇಟ್ಟು ಧರಣಿ

Update: 2021-02-20 16:09 GMT
ಪೊಲೀಸ್ ಠಾಣೆಯ ಎದುರು ಧರಣಿ ( ಒಳ ಚಿತ್ರದಲ್ಲಿ ಮೃತ ಶೀಲಾ)

ಚಿಕ್ಕಮಗಳೂರು, ಫೆ.20: ಎರಡು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ  ಮೃತಪಟ್ಟಿದ್ದಾರೆಂದು ಆರೋಪಿಸಿ ಮೃತರ ಸಂಬಂಧಿಕರು ಕಡೂರು ಪಟ್ಟಣದ ಪೊಲೀಸ್ ಠಾಣೆಯ ಎದುರು ಶವ ಇಟ್ಟು ಧರಣಿ ನಡೆಸಿದ ಘಟನೆ ಶನಿವಾರ ನಡೆದಿದೆ.

ಜಿಲ್ಲೆಯ ಕಡೂರು ತಾಲೂಕಿನ ಅಂಚೆ ಚೋಮನಹಳ್ಳಿ ನಿವಾಸಿ ಗರ್ಭಿಣಿಯಾಗಿದ್ದ ಶೀಲಾ(22) ಅವರನ್ನು ಕೆಲ ದಿನಗಳ ಹಿಂದೆ ಪಟ್ಟಣದ ಸರಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ಮಹಿಳೆಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆದಿದ್ದರು. ಶೀಲಾ ಗಂಡು ಮಗುವಿಗೆ ಜನ್ಮ ನೀಡಿದ್ದರೂ ಹೊಟ್ಟೆ ನೋವು ಕಡಿಮೆಯಾಗಿರಲಿಲ್ಲ. ಶನಿವಾರ ನೋವು ತೀವ್ರವಾಗಿದ್ದು, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಸರಿಯಾಗಿ ತಪಾಸಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಮಹಿಳೆ ಮೃತಪಟ್ಟಿದ್ದಾಳೆಂದು ಮೃತ ಮಹಿಳೆಯ ಪತಿ ಆರೋಪಿಸಿದ್ದಾರೆ.

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಶನಿವಾರ ಮೃತಳ ಸಂಬಂಧಿಕರು ಕಡೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೇ ಮೃತಳ ಶವವನ್ನು ಠಾಣೆಯ ಮುಂದಿಟ್ಟುಕೊಂಡು ವೈದ್ಯರ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದರು. ಮೃತಳ ಸಂಬಂಧಿಕರು ಈ ವೇಳೆ ಶವದ ಮುಂದೆ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯಗಳು ಕಂಡುಬಂತು.

ಠಾಣಾಧಿಕಾರಿ ಘಟನೆ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News