ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಸಾಧ್ಯ: ಸಿದ್ದರಾಮಯ್ಯ

Update: 2021-02-20 16:42 GMT

ಮೈಸೂರು,ಫೆ.20: ಇತ್ತೀಚೆಗೆ ನನ್ನನ್ನು ಟೀಕೆ ಮಾಡದಿದ್ದರೆ ಮಾಧ್ಯಮದವರಿಗೆ ನಿದ್ದೆ ಬರಲ್ಲ. ಅವರು ಟೀಕೆ ಮಾಡುತ್ತಾರೆ. ಬಣ್ಣ ಕಟ್ಟುತ್ತಾರೆ. ನಾನು ಸ್ವಾಗತ ಮಾಡುತ್ತೇನೆ. ಯಾಕೆಂದರೆ ಪತ್ರಿಕಾ ಸ್ವಾತಂತ್ರ್ಯ ಇರಬೇಕು. ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಇರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನೂತನವಾಗಿ ಪ್ರಾರಂಭವಾದ ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ಉದ್ಘಾಟಿಸಿ ನಂತರ ಅವರು ಮಾತನಾಡಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಿರುಲು ಸಾಧ್ಯ. ಪ್ರಜಾಪ್ರಭುತ್ವ ಇಲ್ಲದಿದ್ದರೆ ಸರ್ವಾಧಿಕಾರ ಬಂದು ಬಿಡುತ್ತದೆ. ಸರ್ವಾಧಿಕಾರ ಇದ್ದರೆ ವಾಕ್, ಅಭಿವ್ಯಕ್ತಿ, ಪತ್ರಿಕಾ ಸ್ವಾತಂತ್ರ್ಯ ಯಾವುದೂ ಇರುವುದಿಲ್ಲ. ಚೈನಾದಲ್ಲಿ ಸರ್ಕಾರ ನಿಯಂತ್ರಣ ಮಾಡುತ್ತದೆ. ಅಲ್ಲಿ ಯಾವುದೇ ಸ್ವಾತಂತ್ರ್ಯ ಇಲ್ಲ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ. ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ. ಅದಕ್ಕೆ ಅನುಗುಣವಾಗಿ ದೇಶ ನಡೆಯಬೇಕು. ಆದರೆ ಕೆಲವೊಮ್ಮೆ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮರೆತು ಬಿಡುತ್ತೇವೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತೇವೆ. ಅವೆಲ್ಲ ಆಗಬಾರದು ಎಂದು ಹೇಳಿದರು.

ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮನಾಗಿದ್ದು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಛಾಯಾ ಚಿತ್ರಗಳನ್ನು ನೋಡಿದಾಕ್ಷಣ ಸುದ್ದಿಯ ಎಲ್ಲ ವಿವರಗಳು ಕಣ್ಣ ಮುಂದೆ ಪ್ರತ್ಯಕ್ಷಗೊಳ್ಳುತ್ತವೆ. ವರದಿಗಾರರು ವರದಿಯನ್ನು ಬರೆಯುತ್ತಾರೆ. ಅದಕ್ಕಾಗಿ ರವಿ ಕಾಣದನ್ನ ಕವಿ ಕಂಡ ಎಂಬ ಗಾದೆ ನೆನಪಾಯಿತು ಎಂದರು.

ಇಂದಿನ ಸಾಮಾಜಿಕ ಜಾಲ ತಾಣಗಳಿಂದಾಗಿ ಛಾಯಾ ಚಿತ್ರೋದ್ಯಮ ಕೊಂಚ ಕಳೆಗುಂದಿರುವುದು ನಿಜವಾದರೂ, ಅದು ತನ್ನ ಪ್ರಾಮುಖ್ಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ನಾನು ಟಿವಿ ನೋಡುವುದಕ್ಕಿಂತ ಹೆಚ್ಚಾಗಿ ಪತ್ರಿಕೆಗಳನ್ನೇ ಓದುವುದು ಹವ್ಯಾಸ ಇಟ್ಟುಕೊಂಡಿದ್ದೇನೆ. ಕಾರಣ ಟಿವಿ ಮೇಲಿಂದ ಮೇಲೆ ಒಂದೇ ವಿಷಯವನ್ನು ಪ್ರಸಾರ ಮಾಡುತ್ತಾರೆ. ಆದರೆ ಪತ್ರಿಕೆಗಳು ಹಾಗಲ್ಲ, ಅವು ಒಂದು ಬಾರಿ ಮಾತ್ರ ವಿಷಯವನ್ನು ಮುದ್ರಿಸುತ್ತವೆ. ಹಾಗಾಗಿ ಇದರಲ್ಲಿ ಹೆಚ್ಚಿನ ಸತ್ಯಾಂಶಗಳಿರುವುದರಿಂದಲೇ ನಾನು ಟಿವಿ ನೋಡುವ ಬದಲು ಪತ್ರಿಕೆಗಳನ್ನೇ ಹೆಚ್ಚಾಗಿ ಓದುತ್ತೇನೆ ಎಂದರು.

ಕಾಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಝಮೀರ್ ಅಹ್ಮದ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಕರ್ನಾಟಕ ಫೋಟೋ ಜರ್ನಲಿಸ್ಟ್ ಅಸೋಸಷಿಯೇಶನ್ ಅಧ್ಯಕ್ಷ ಈಶ್ವರ್, ಮೈಸೂರು ಜಿಲ್ಲಾ ಫೋಟೋ ಜರ್ನಲಿಸ್ಟ್ ಅಸೋಸಿಯೇಶನ್ ಅಧ್ಯಕ್ಷ ಪ್ರಗತಿ ಗೋಪಾಕೃಷ್ಣ, ಉಪಾಧ್ಯಕ್ಷ ಅನುರಾಗ್ ಬಸವರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News