ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ 'ಸಂವಿಧಾನ ಬದಲಾವಣೆ' ಹೇಳಿಕೆ: ವ್ಯಾಪಕ ಟೀಕೆಗೆ ಗುರಿಯಾದ ದೊಡ್ಡರಂಗೇಗೌಡ

Update: 2021-02-20 18:29 GMT

ಹಾಸನ, ಫೆ.20: ''ಅಂಬೇಡ್ಕರ್ ಅವರಿಂದ ಅಂದಿನ ಕಾಲಘಟ್ಟಕ್ಕೆ ಸಂಬಂಧಿಸಿ ಸಂವಿಧಾನವನ್ನು ರಚನೆ ಮಾಡಲಾಗಿದೆ. ಆದರೆ ಪ್ರಸ್ತುತ ವಿದ್ಯಾಮಾನಕ್ಕೆ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್‌ನ ನಿಯೋಜಿತ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಆಗ್ರಹಿಸಿದ್ದಾರೆ. ಆದರೆ ಈ ಹೇಳಿಕೆ ಬಳಿಕ ದೊಡ್ಡರಂಗೇಗೌಡ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ 19ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡರಂಗೇಗೌಡ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಬದಲಾವಣೆಯ ಬಗ್ಗೆ ವಿಷಯ ಪ್ರಸ್ತಾವಿಸಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ದೊಡ್ಡರಂಗೇಗೌಡ ಅವರು, ಅಂಬೇಡ್ಕರ್ ಅವರಿಂದ ಅಂದಿನ ಕಾಲಘಟ್ಟಕ್ಕೆ ಸಂಬಂಧಿಸಿ ಸಂವಿಧಾನವನ್ನು ರಚನೆ ಮಾಡಲಾಗಿದೆ. ಆದರೆ ಪ್ರಸ್ತುತ ವಿದ್ಯಾಮಾನಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾಹಿತಿಗಳು ಖಂಡಿಸಿದ್ದಾರೆ.

ಸಾಹಿತಿಗಳು ಕಾರ್ಯಕ್ರಮದಿಂದ ಹೊರಗೆ: ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರ ಸಂವಿಧಾನ ಬದಲಾವಣೆಯ ವಿಷಯ ಪ್ರಸ್ತಾವಕ್ಕೆ ಅನೇಕ ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಂತಹ ಉತ್ತಮ ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾಗಿ ದೊಡ್ಡರಂಗೇಗೌಡರ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಕಾರ್ಯಕ್ರಮದಿಂದ ಹೊರಗೆ ನಡೆದ ಪ್ರಸಂಗವೂ ನಡೆಯಿತು.

ಸಮ್ಮೇಳನ ಸೂಕ್ತ ವೇದಿಕೆಯೇ?: ಡಾ.ಅಂಬೇಡ್ಕರ್ ಸಂವಿಧಾನ ರಚಿಸುವ ಮುನ್ನ ಸಮಾನತೆ ಹಾಗೂ ಸಾರ್ವಭೌಮತ್ವ ಕಾಪಾಡುವ ಉದ್ದೇಶವನ್ನು ಮುಂದಿಟ್ಟುಕೊಂಡೇ ಸಂವಿಧಾನ ರಚಿಸಲಾಗಿದ್ದು, ಈ ಬಗ್ಗೆ ಸಮ್ಮೇಳನದಲ್ಲಿ ಸಂವಿಧಾನ ತಿದ್ದುಪಡಿಯ ಬಗ್ಗೆ ವಿಷಯ ಪ್ರಸ್ತಾವ ಸೂಕ್ತವೇ? ಎಂಬ ಮಾತುಗಳು ಕೇಳಿ ಬಂದಿದೆ.

ಸಾಹಿತಿಯಾಗಿ ಸಾಹಿತ್ಯದ ಬಗ್ಗೆ ಮಾತನಾಡುವ ಬದಲು ಈ ರೀತಿಯ ಹೇಳಿಕೆ ನೀಡಿರುವುದು ಖಂಡನೀಯ. ಸಾಹಿತಿಗಳು ಕನ್ನಡಾಭಿಮಾನ, ಭಾಷಾಭಿಮಾನ ಹಾಗೂ ಕನ್ನಡ ನೆಲ, ಜಲ, ಸಂಪ್ರದಾಯ, ಸಂಸ್ಕೃತಿ ಮತ್ತು ಪ್ರಾದೇಶಿಕ ವ್ಯವಸ್ಥೆಗೆ ಪೂರಕವಾಗಿ ಮಾತನಾಡುವ ಬದಲು ಒಂದು ರಾಜಕೀಯ ಪಕ್ಷದ ವಕ್ತಾರರಂತೆ ಹಾಗೂ ಒಂದು ಸಂಪ್ರದಾಯದ ವಕ್ತಾರರಂತೆ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಬಳಸಿಕೊಂಡಿರುವುದು ತಪ್ಪು.
-ಸ್ಟೀವನ್ ಪ್ರಕಾಶ್, ಬಿ.ಪಿ.ಎಸ್ ಸಂಘಟನೆಯ ಜಿಲ್ಲಾಧ್ಯಕ್ಷ

ಸಂವಿಧಾನವನ್ನು ಸಾಹಿತಿಗಳು ಪರಿಪೂರ್ಣವಾಗಿ ಅಧ್ಯಯನ ಮಾಡಿಕೊಳ್ಳಬೇಕು. ಇಂತಹ ಹೇಳಿಕೆಗಳನ್ನು ನೀಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಹ್ವಾನ ನೀಡುವುದು ಅಪಮಾನ. ದೊಡ್ಡ ರಂಗೇಗೌಡರು ಮಾತ್ರವಲ್ಲ ಅಂತಹ ಸಾವಿರ ಸಾಹಿತಿಗಳು ಒತ್ತಾಯಿಸಿದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ದೊಡ್ಡ ರಂಗೇಗೌಡರೂ ಸಂವಿಧಾನವನ್ನು ಒಮ್ಮೆ ಸಂಪೂರ್ಣವಾಗಿ ಓದಿಕೊಳ್ಳುವುದು ಉತ್ತಮ.
- ಕೆ. ಈರಪ್ಪ, ದಲಿತ ಸಂಘರ್ಷ ಸಮಿತಿ ಮುಖಂಡ

ರಾಜಕೀಯ ಪ್ರೇರಿತ ಮಾತುಗಳನ್ನು ಹೇಳುವ ಇವರು ಸಾಹಿತಿ ಎನಿಸಿಕೊಳ್ಳಲು ಅನರ್ಹರು. ಸಂವಿಧಾನವನ್ನು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಲು ಅದೇನು ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಕಥೆ ಕವನಗಳನ್ನು ಒಳಗೊಂಡ ಪುಸ್ತಕವಲ್ಲ. ಸಾಹಿತ್ಯ ಸಮ್ಮೇಳನದಂತಹ ಉತ್ತಮ ವೇದಿಕೆಯಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇವರು ಸಾಹಿತ್ಯ ಕ್ಷೇತ್ರವನ್ನು ಬಿಟ್ಟು ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಳ್ಳುವುದು ಉತ್ತಮ.
-ಎಚ್.ಕೆ ಸಂದೇಶ್, ಡಿಎಸ್ಸೆಸ್ ಮುಖಂಡ

ಸಾಹಿತಿ, ಜನಸಾಮಾನ್ಯ, ಜನಪ್ರತಿನಿಧಿ ಸೇರಿದಂತೆ ಪ್ರತಿಯೊಬ್ಬ ಭಾರತೀಯ ಪ್ರಜೆ ಸಂವಿಧಾನದ ಅಡಿ ಜೀವನ ಸಾಗಿಸುತ್ತಿದ್ದು ಕಾಲಕ್ಕೆ ಅನುಗುಣವಾಗಿ ಸಂವಿಧಾನ ಬದಲಾವಣೆ ಮಾಡುವ ದೊಡ್ಡರಂಗೇಗೌಡರ ಹೇಳಿಕೆ ಖಂಡನೀಯ. ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿಯ ಬಗ್ಗೆ ಭೋದನೆ ಮಾಡುವ ಬದಲಾಗಿ ಸಂವಿಧಾನದ ಬಗ್ಗೆ ಸಂಶಯ ಮೂಡುವಂತೆ ಹೇಳಿಕೆ ನೀಡಿರುವುದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಾಹಿತಿಯಾದವರಿಗೆ ಅರಿವಿರಬೇಕು.
-ಅಂಬುಗ ಮಲ್ಲೇಶ್, ದಸಂಸ ಮುಖಂಡ

ನಿಜವಾದ ಸಾಹಿತ್ಯಾಭಿಮಾನ ಹೊಂದಿರಬೇಕು. ಅದನ್ನು ಬಿಟ್ಟು ಪ್ರಗತಿಪರರಂತೆ ವರ್ತಿಸುವ ದೊಡ್ಡರಂಗೇಗೌಡ ಅವರ ಮುಖವಾಡ ಸಮಯಕ್ಕನುಗುಣವಾಗಿ ಆಗಾಗ ಬಯಲಾಗುವುದು. ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಲ್ಲಿ ಸಂವಿಧಾನದ ಬದಲಾವಣೆ ವಿಚಾರ ಪ್ರಸ್ತಾವ ಸರಿಯಲ್ಲ. ಸಂವಿಧಾನದಲ್ಲಿ ಅಂತಹ ತಪ್ಪು ಧೋರಣೆಗಳಿದ್ದಲ್ಲಿ ಅದನ್ನು ಪ್ರಸ್ತಾಪಿಸಲಿ. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ಖಂಡನೀಯ. ಇಂತಹ ಹೇಳಿಕೆಗಳು ಮರುಕಳಿಸಿದಲ್ಲಿ ಇವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.
- ಆರ್.ಪಿ.ಐ ಸತೀಶ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News