ಯಡಿಯೂರಪ್ಪ ಜಾತೀಯತೆ ಪೋಷಿಸುವ ಕೆಲಸ ಮಾಡುತ್ತಿದ್ದಾರೆ: ಪ್ರೊ.ರವಿವರ್ಮ ಕುಮಾರ್

Update: 2021-02-20 18:40 GMT

ಮೈಸೂರು,ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತೀಯತೆ ಪೋಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರಿಗಾಗಿ ನಡೆಯಬೇಕಿದ್ದ ಸರ್ಕಾರ ಇಂದು ಲಿಂಗಾಯಿತರಿಂದ, ಲಿಂಗಾಯಿತರಿಗಾಗಿ, ಲಿಂಗಾಯತರಿಗೋಸ್ಕರ ಎಂಬಂತಾಗಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧಾನ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಶನಿವಾರ ನಡೆದ ಅಂತರ್ ರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಾತ್ಯತೀತ ಸರ್ಕಾರ ನಡೆಸುತ್ತಿಲ್ಲ, ಜಾತೀಯತೆಯ ಸರ್ಕಾರ ನಡೆಸುತ್ತಿದ್ದಾರೆ. ಹಾಗಾಗಿಯೇ ಮೀಸಲಾತಿ ಚಳುವಳಿಗಳು ನಡೆಯುತ್ತಿವೆ. ಜಾತ್ಯತೀತ ಸರ್ಕಾರ ಇದ್ದರೆ ಇಂತಹ ಚಳವಳಿಗಳು ನಡೆಯುತ್ತಿರಲಿಲ್ಲ ಎಂದರು.

ಯಡಿಯೂರಪ್ಪ ಹಲವರು ಜಾರಿಗಳ ನಿಗಮ ಮಂಡಳಿ ರಚಿಸಿ, ಸಾಕಷ್ಟು ಹಣ ನೀಡಿದ್ದಾರೆ. ಅವರ ಜಾತಿಗೆ 500 ಕೋಟಿ ರೂ. ವೀಸಲಿಟ್ಟಿದ್ದಾರೆ. ಜಾತೀಯತೆಯನ್ನು ರಾಜಾರೋಷವಾಗಿ ಪೋಷಿಸುತ್ತಿದ್ದಾರೆ. ಸಂವಿಧಾನ ವಿರೋಧಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ವಾಮೀಜಿಗಳು ಸ್ವಾಮೀಜಿಗಳಾಗಿ ನಡೆದುಕೊಳ್ಳದೆ ರಾಜಕೀಯ ಮಾಡುತ್ತಿದ್ದಾರೆ. ಸ್ವಾಮೀಜಿ ಎನಿಸಿಕೊಳ್ಳುವ ಯೋಗ್ಯತೆ ಅವರಿಗಿಲ್ಲ, ಎಲ್ಲರೂ ಜಾತೀಯತೆ ಪೋಷಿಸುವವರೇ ಆಗಿರುವುದರಿಂದ ಸ್ವಾಮೀಜಿಗಳ ನಡೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು.

ಸ್ವಾಮೀಜಿಗಳು ಇಂಥವರನ್ನೇ ಮಂತ್ರಿ ಮಾಡಬೇಕು ಎಂದು ಒತ್ತಡ ಹೇರುತ್ತಾರೆ. ಮಠಗಳು ಇಂದು ಶಕ್ತಿಕೇಂದ್ರ ಮತ್ತು ಮಂತ್ರಿಗಳ ಆಯ್ಕೆ ಕೇಂದ್ರಗಳಾಗಿವೆ. ಸಂವಿಧಾನೇತರ ಅಧಿಕಾರಗಳು ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈಗಿನ ಬೆಳವಣಿಗೆಗಳು ಉತ್ತಮ ಉದಾಹರಣೆ ಎಂದು ಹೇಳಿದರು.

ಕೊರೋನದಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಬಲಾಢ್ಯರು ಬಲಾಢ್ಯರಾಗುತ್ತಲೇ ಇದ್ದಾರೆ. ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಹಾಳಾಗಿದೆ. ಇದನ್ನು ಮರೆಮಾಚುವ ಉದ್ದೇಶದಿಂದ ಸರ್ಕಾರವೇ ಇಂತಹ ಚಳವಳಿಲಗಳಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಅಂಬೇಡ್ಕರ್ ಸಂಶೋಧನಾ ಕೇಂದ್ರದ ಡಾ.ಜೆ.ಸೋಮಶೇಖರ್, ಡಾ.ನರೇಂದ್ರ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News