ತನ್ನ ಗೆಳತಿಗೆ ಗಿಫ್ಟ್ ನೀಡಲು ಒಂಟೆ ಮರಿ ಕಳವು ಮಾಡಿ ಪೊಲೀಸರ ಅತಿಥಿಯಾದ ದುಬೈ ನಿವಾಸಿ

Update: 2021-02-21 07:24 GMT

ರಿಯಾದ್: ದುಬೈ ನಿವಾಸಿಯೊಬ್ಬ ತನ್ನ ಗೆಳತಿಗೆ ಒಂಟೆಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿ ಜೈಲು ಕಂಬಿ ಎಣಿಸುತ್ತಿದ್ದಾನೆ. 

ದುಬೈ ನಿವಾಸಿಯೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬದಂದು ಹೆಚ್ಚಿನ ಮೌಲ್ಯದ ವಸ್ತುವನ್ನು ನೀಡಲು ಬಯಸಿದ್ದ. ಹೀಗಾಗಿ ಆತ ಆಗಷ್ಟೇ ಹುಟ್ಟಿದ ಒಂಟೆಯನ್ನು ಕದ್ದಿದ್ದಾನೆ. ಬೆಲೆಬಾಳುವ ಒಂಟೆಯ ಮರಿಯ ಕದ್ದ ಆರೋಪದ ಮೇಲೆ ಎಮಿರಾಟಿ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಯುಎಇ ಸರಕಾರದ ಸಂಪರ್ಕವಿರುವ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ಒಂಟೆ ಮರಿಯ ಮಾಲಕ ತಿಂಗಳಾರಂಭದಲ್ಲಿ ತನ್ನ ಫಾರ್ಮ್‍ನಿಂದ ಒಂಟೆ ಮರಿ ಕಾಣೆಯಾಗಿದೆ ಎಂದು ದೂರು ನೀಡಿದ್ದ. ದುಬೈ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಒಂಟೆ ಮರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಅದು ಸಿಕ್ಕಿರಲಿಲ್ಲ ಎನ್ನಲಾಗಿದೆ.

ಹಲವು ದಿನಗಳ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನ ಜಮೀನಿನ 3 ಕಿ.ಮೀ.ದೂರದಲ್ಲಿ ಒಂಟೆ ಮರಿ ಓಡಾಡುತ್ತಿದೆ ಎಂದು ಹೇಳಿದ್ದ. ವಿಚಾರಣೆ ನಡೆಸಿದಾಗ ಆ ವ್ಯಕ್ತಿ, ತನ್ನ ನೆರೆಯ ಫಾರ್ಮ್‍ನಿಂದ ಒಂಟೆ ಮರಿಯನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದ. ತನ್ನ ಗೆಳತಿಗಾಗಿ ದೊಡ್ಡ ಒಂಟೆಯನ್ನು ಕದಿಯಲು ವಿಫಲವಾದ ಬಳಿಕ ಮರಿ ಒಂಟೆ ಕದ್ದಿರುವುದಾಗಿ ಹೇಳಿದ್ದಾನೆ. ಕದ್ದ ಕೆಲವು ದಿನಗಳ ಬಳಿಕ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ಪೊಲೀಸರಿಗೆ ಕರೆ ಮಾಡಿ ಒಂಟೆಯ ಕುರಿತು ಕಥೆ ಕಟ್ಟಿದ್ದ. 

ಪೊಲೀಸರು ಒಂಟೆಯನ್ನು ಅದರ ಮಾಲಿಕರಿಗೆ ಹಿಂದಿರುಗಿಸಿ ಕಳ್ಳತನ ಹಾಗೂ ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಶಂಕಿತ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ ಎಂದು ಯುಎಇ ಪತ್ರಿಕೆ ನ್ಯಾಶನಲ್ ವರದಿ ಮಾಡಿದೆ.

ಒಂದು ಕಾಲದಲ್ಲಿ ದುಬೈ ಜೀವನದ ಅತ್ಯಗತ್ಯ ಭಾಗವಾಗಿದ್ದ ಒಂಟೆಗಳನ್ನು ಕೆಲವು ಸ್ಥಳೀಯರು ಆಹಾರ ಹಾಗೂ ಹಾಲಿಗಾಗಿ ತಮ್ಮ ಜಮೀನಿನಲ್ಲಿ ಸಾಕುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News