ಸಿಬಿಎಸ್‌ಇ ಪಠ್ಯ ಪುಸ್ತಕದಲ್ಲಿ ತಿರುವಳ್ಳುವರ್ ಭಾವಚಿತ್ರ ಕೇಸರೀಕರಣ: ಎಂ.ಕೆ. ಸ್ಟಾಲಿನ್ ತರಾಟೆ

Update: 2021-02-21 14:54 GMT

ಚೆನ್ನೈ, ಫೆ. 21: ಸಿಬಿಎಸ್‌ಇಯ 8ನೇ ತರಗತಿ ಪಠ್ಯ ಪುಸ್ತಕದಲ್ಲಿ ಇರುವ ಕೇಸರಿ ನಿಲುವಂಗಿ ಧರಿಸಿದ, ಹಣೆ ಹಾಗೂ ತೋಳುಗಳಲ್ಲಿ ವಿಭೂತಿ ಲೇಪಿಸಿದ ತಮಿಳು ತತ್ವಜ್ಞಾನಿ ತಿರುವಳ್ಳುವರ್ ಅವರ ಭಾವಚಿತ್ರದ ಬಗ್ಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಮಿಳು ಗ್ರಂಥ ‘ತಿರುಕುರಳ್’ ಬರೆದ ಸಂತ, ಕವಿ ತಿರುವಳ್ಳುವರ್ ಅವರಿಗೆ ಜುಟ್ಟು ಇರುವಂತೆ ಹಾಗೂ ಕುತ್ತಿಗೆ, ತೋಳುಗಳಲ್ಲಿ ರುದ್ರಾಕ್ಷಿ ಧರಿಸಿರುವಂತೆ ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.

“8ನೇ ತರಗತಿಯ ಪಠ್ಯಪುಸ್ತಕದರಲ್ಲಿ ತಿರುವಳ್ಳುವರ್ ಅವರನ್ನು ಆರ್ಯನಂತೆ ವೇಷಭೂಷಣ ಬದಲಾಯಿಸಲಾಗಿದೆ. ಬಿಜೆಪಿ ಸರಕಾರ ಇದಕ್ಕೆ ಅನುಮತಿ ನೀಡಿದೆ ಹಾಗೂ ಎಐಎಡಿಎಂಕೆ ಸರಕಾರ ಮೌನವಾಗಿ ಗಮನಿಸುತ್ತಿದೆ. ತಮಿಳು ಸಂಸ್ಕೃತಿಯಲ್ಲಿ ಆರ್ಯರ ಗಿಮಿಕ್ ಅನ್ನು ತಮಿಳುನಾಡು ಸ್ವೀಕರಿಸಲಾರದು. ಡಿಎಂಕೆ ರೋಗಿಯಾಗಲಾರದು. ಎಚ್ಚರಿಕೆ !” ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕೇಸರಿ ನಿಲುವಂಗಿ ಹಾಗೂ ಹಣೆಯಲ್ಲಿ ವಿಭೂತಿ ಧರಿಸಿದ ತಿರುವಳ್ಳುವರ್ ಅವರ ಚಿತ್ರವನ್ನು ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ಎರಡು ವರ್ಷಗಳ ಹಿಂದೆ ಡಿಎಂಕೆ ಹಾಗೂ ಎಡ ಪಕ್ಷಗಳು ಬಿಜೆಪಿಯ ತಮಿಳುನಾಡು ಘಟಕವನ್ನು ತರಾಟೆಗೆ ತೆಗೆದುಕೊಂಡಿತ್ತು. ಸಾಮಾನ್ಯವಾಗಿ ತಮಿಳುನಾಡು ರಾಜ್ಯ ಸರಕಾರದ ಕಚೇರಿಗಳಲ್ಲಿ ಯಾವುದೇ ಧಾರ್ಮಿಕ ಸಂಕೇತ ಇಲ್ಲದ ಬಿಳಿ ನಿಲುವಂಗಿ ಧರಿಸಿರುವ ತಿರುವಳ್ಳುವರ್ ಅವರ ಭಾವಚಿತ್ರವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News