ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಸ್ಫೋಟ: ಶ್ರೀಮಂಗಲ ಬಂದ್, ಶವವಿಟ್ಟು ಪ್ರತಿಭಟನೆ

Update: 2021-02-21 17:47 GMT

ಮಡಿಕೇರಿ, ಫೆ.21: ಇಬ್ಬರನ್ನು ಬಲಿ ಪಡೆದ ಹುಲಿ ದಾಳಿ ಪ್ರಕರಣವನ್ನು ಖಂಡಿಸಿ ಗ್ರಾಮಸ್ಥರು, ರೈತ ಸಂಘ, ಬೆಳೆಗಾರರು, ವಿವಿಧ ರಾಜಕೀಯ ಪಕ್ಷಗಳ ಮತ್ತು ಸಂಘ, ಸಂಸ್ಥೆಗಳ ಮುಖಂಡರು ಶ್ರೀಮಂಗಲ ಬಂದ್ ಮಾಡಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ಹುಲಿ ದಾಳಿಯಿಂದ ಮೃತಪಟ್ಟ ಅಯ್ಯಪ್ಪನ ಮೃತದೇಹವನ್ನು ಶ್ರೀಮಂಗಲ ಬಸ್ಸು ನಿಲ್ದಾಣದ ಸಮೀಪವಿರಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.      ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಕಟ್ಟಿ ಮಂದಯ್ಯ ಮಾತನಾಡಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದರು. ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ ಮತ್ತಿತರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹುಲಿ ಸೆರೆಗೆ ಒತ್ತಾಯಿಸಿದರು.

ವಕೀಲ ಎಂ.ಟಿ.ಕಾರ್ಯಪ್ಪ, ಜಿ.ಪಂ ಸದಸ್ಯ ಶಿವು ಮಾದಪ್ಪ, ತಾ.ಪಂ ಸದಸ್ಯ ಪೂಣಚ್ಚ, ಜಿ.ಪಂ ಸದಸ್ಯ ಶಿವುಮಾದಪ್ಪ, ಪ್ರಮುಖರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕೊಟ್ರಮಾಡ ತಿಮ್ಮಯ್ಯ, ಸುಧಿ, ಕಾಳೀಮಾಡ ಪ್ರಶಾಂತ್ ಅಪ್ಪಯ್ಯ, ಮಂದಣ್ಣ ಸ್ಥಳದಲ್ಲಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಆಗಮಿಸಿದ ವೀಣಾಅಚ್ಚಯ್ಯ
ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಅವರು, ಮೃತರ ಕುಟುಂಬಗಳಿಗೆ ಯಾವುದೇ ತಕರಾರಿಲ್ಲದೆ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅವರು ಹುಲಿ ಸೆರೆ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ, ಸೆರೆ ಸಿಗದಿದ್ದಲ್ಲಿ ಕೊಲ್ಲುವುದಾಗಿ ತಿಳಿಸಿದರು. 

ಮೃತರ ಕುಟುಂಬಗಳಿಗೆ ಪರಿಹಾರವಾಗಿ ತಲಾ 7.50 ಲಕ್ಷ ರೂ.ಗಳನ್ನು ಅರಣ್ಯ ಇಲಾಖೆ ಮೂಲಕ ನೀಡುವುದಾಗಿ ಭರವಸೆ ನೀಡಿದರು. ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೆ ಸ್ಥಳದಲ್ಲೇ ರೂ.20 ಸಾವಿರವನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News