ಅಭಿವೃದ್ಧಿಗಿಂತ ಹಣ ಲೂಟಿ ಹೊಡೆಯುವುದೇ ಚಿಂತೆ: ರಾಜ್ಯ ಸರಕಾರ ವಿರುದ್ಧ ಎಚ್‍ಡಿಕೆ ವಾಗ್ದಾಳಿ

Update: 2021-02-21 17:51 GMT

ಮಂಡ್ಯ, ಫೆ.21: ರಾಜ್ಯ ಸರಕಾರಕ್ಕೆ ಸಮಗ್ರ ಅಭಿವೃದ್ಧಿಯ ಚಿಂತನೆಯೇ ಇಲ್ಲ. ಹಣ ಲೂಟಿ ಹೊಡೆಯುವುದೇ ಇವರ ಚಿಂತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಮದ್ದೂರು ತಾಲೂಕು ಅಣ್ಣೂರು ಗ್ರಾಮದಲ್ಲಿ ರವಿವಾರ ಜೆಡಿಎಸ್ ಪಕ್ಷದ ಕಾರ್ಯಕರ್ತರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾವೇರಿ ಅಚ್ಚುಕಕಟ್ಟು ಪ್ರದೇಶಕ್ಕೆ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸುಮಾರು 6 ಸಾವಿರ ಕೋಟಿಗೂ ಹೆಚ್ಚು ಕಾಮಗಾರಿಗಳಿಗೆ ಒಪ್ಪಿಗೆ ಕೊಟ್ಟಿದ್ದೆವು. ಬಿಜೆಪಿ ಸರಕಾರ ಅದನ್ನು ವಾಪಸ್ಸು ಪಡೆದುಕೊಂಡಿದೆ. ದುಡ್ಡು ಹೊಡೆಯುವ ಕಾರ್ಯಕ್ರಮಗಳೇ ಇವರ ಚಿಂತನೆಯಾಗಿದೆ ಎಂದು ಆರೋಪಿಸಿದರು.

ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಅನೇಕ ರಾಜ್ಯಗಳಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ರಾಜ್ಯಗಳಲ್ಲಿ ಒಂದೊಂದು ರೀತಿಯ ಸಮಸ್ಯೆ ಇದೆ. ಪ್ರಧಾನಮಂತ್ರಿಗಳು ಪ್ರತಿಭಟನಾನಿರತ ರೈತರನ್ನು ನೇರವಾಗಿ ಕರೆದು ಅವರ ಸಮಸ್ಯೆ ಬಗೆಹರಿಸಬೇಕು ಎಂದೂ ಅವರು ಒತ್ತಾಯಿಸಿದರು.

ಗ್ರಾಮ ವಾಸ್ತವ್ಯವು ಜನರ ಕಷ್ಟ ಅರಿಯಲು ಅಧಿಕಾರಿಗಳಿಗೆ ಒಳ್ಳೆಯ ಅವಕಾಶ. ನಾನು ಸಿಎಂ ಆಗಿದ್ದಾಗ ಪ್ರಥಮವಾಗಿ ಗ್ರಾಮ ವಾಸ್ತವ್ಯ ಮಾಡಿದ್ದೆ. ನಂತರ ಬಂದಂತಹ ಸರಕಾರಗಳು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದಾರೆ. ಇದರಿಂದ ನಿಜವಾದ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಆಗುತ್ತದೆ. ಆದರೆ, ಅಧಿಕಾರಿಗಳಿಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸರಕಾರದ ಆರ್ಥಿಕ ಸಹಕಾರ ಇಲ್ಲದಿದ್ದರೆ ಏನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ರಾಜಕೀಯ ಎಲ್ಲಾ ಸತ್ತು ಹೋಗಿದೆ. ರಾಜಕೀಯದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಟೀಕೆಗಳು ಸಹಜ. ನಾವು ಮಾಡಿರುವ ಅಭಿವೃದ್ದಿ ಕಾರ್ಯಗಳು ಜನತೆಗೆ ಗೊತ್ತಿದ್ದು, ಅವರೇ ನಿರ್ಧಾರ ಮಾಡುತ್ತಾರೆ. ನಮ್ಮನ್ನು ಟೀಕಿಸಿದರೆ ಏನೂ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಟೀಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಚಿಕ್ಕರಸಿನಕೆರೆ ಗೇಟ್‍ನಲ್ಲಿರುವ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಮದುವೆ ಸಮಾರಂಭ, ಅಣ್ಣೂರು ಗ್ರಾಮದ ಜೆಡಿಎಸ್ ಮುಖಂಡ ಅಣ್ಣೂರು ನವೀನ್ ಹಾಗು ಚನ್ನಶೆಟ್ಟಿ ಅವರ ಗೃಹ ಪ್ರವೇಶ ಕಾರ್ಯಕ್ರಮ, ಕ್ಯಾತಘಟ್ಟ ಗ್ರಾಮದ ಅಭಯ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಶಾಸಕರಾದ ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ರಮೇಶ, ತಾಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ, ಕೂಳಗೆರೆ ಶೇಖರ, ಎ.ಟಿ.ಬಲ್ಲೇಗೌಡ, ಶಂಕರ್, ಯೋಗೇಂದ್ರ, ಕ್ಯಾತಘಟ್ಟ ರವಿಕುಮಾರ, ಕೆ.ಟಿ.ತಿಮ್ಮರಾಜು, ಗಿರೀಶ, ಬೊಮ್ಮನದೊಡ್ಡಿ ಬಸವರಾಜು, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News