ಕರ್ನಾಟಕಕ್ಕೆ ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ: ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು

Update: 2021-02-21 18:26 GMT

ಶಿವಮೊಗ್ಗ, ಫೆ.21: ಭವಿಷ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ಕರ್ನಾಟಕ ರಾಜ್ಯಕ್ಕೆ ಅಂತರ್‌ರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಹೇಳಿದರು.

ಅವರು ಸಹ್ಯಾದ್ರಿ ಕಾಲೇಜಿನಲ್ಲಿ ಖೇಲೋ ಇಂಡಿಯಾ ಯೋಜನೆಯ ಸುಮಾರು 4.5 ಕೋಟಿ ರೂ. ವೆಚ್ಚದ ಒಳ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ರವಿವಾರ ಮಾತನಾಡಿದರು.

ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಉತ್ತಮ ವಾತಾವರಣವಿದೆ. ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರದ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಒಂದೊಂದಾಗಿ ಈಡೇರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಉತ್ತಮ ಕ್ರೀಡಾ ಕೇಂದ್ರವಾಗಿ ರೂಪಿಸಲು ಎಲ್ಲಾ ನೆರವು ಒದಗಿಸಲಾಗುವುದು. ಮುಂದಿನ ಒಲಂಪಿಕ್ಸ್ ಗಳಲ್ಲಿ ಕರ್ನಾಟಕದಿಂದ ಹೆಚ್ಚಿನ ಚಿನ್ನದ ಪದಕದ ನಿರೀಕ್ಷೆ ಹೊಂದಿರುವುದಾಗಿ ಅವರು ಹೇಳಿದರು.

ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಜನಸಂಖ್ಯೆಯಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಲು ನಮಗೆ ವಿಫುಲ ಅವಕಾಶಗಳಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ನೆರವು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರ ಗರಿಷ್ಠ ಪ್ರಯೋಜನವನ್ನು ಯುವ ಜನಾಂಗ ಪಡೆದುಕೊಳ್ಳಬೇಕು ಎಂದು ಹೇಳಿದರು.

2028ರ ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ನಮ್ಮ ದೇಶ 10ರ ಒಳಗೆ ಇರುವುದು ನಮ್ಮ ಗುರಿ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಒಲಂಪಿಕ್ಸ್ ಆಯೋಜನೆ ಮಾಡುವ ಕುರಿತು ಈಗಾಗಲೇ ಸಿದ್ಧತೆಗಳನ್ನು ವಿವಿಧ ಹಂತಗಳಲ್ಲಿ ಪ್ರಾರಂಭಿಸಲಾಗಿದೆ. ದೇಶದ ಸುಮಾರು ಶೇ.70ರಷ್ಟು ಮಂದಿ ಯಾವುದೇ ರೀತಿಯ ದೈಹಿಕ ವ್ಯಾಯಾಮಗಳನ್ನು ನಡೆಸುತ್ತಿಲ್ಲ. ಆರೋಗ್ಯಪೂರ್ಣರಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಫಿಟ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ, ನಾವು ಫಿಟ್ ಆಗಿದ್ದರೆ ದೇಶ ಫಿಟ್ ಆಗಿರಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ಅಗತ್ಯವಾದ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಈ ವಯಸ್ಸಿನಲ್ಲಿ ಯುವಕರು ದುಶ್ಚಟಕ್ಕೆ ಒಳಗಾಗಬೇಡಿ. ನನ್ನ ಸ್ನೇಹಿತ ಉತ್ತಮ ಕ್ರೀಡಾಪಟುವಾಗಿದ್ದ ಆದರೆ ದುಶ್ಚಟದಿಂದ ಸಾವನ್ನಪ್ಪಿದ. ಕಾಲೇಜಿಗೆ ಏನು ಸೌಕರ್ಯ ಬೇಕು ಕೇಳಿ ಮಾಡಿಕೊಡೋಣ. ಮುಂದಿನ ದಿನಗಳಲ್ಲಿ ಬರೀ ಕ್ರೀಡಾಕೂಟದ ಸಲುವಾಗಿ ಸಭೆ ನಡೆಸೋಣ ಎಂದು ಭರವಸೆ ನೀಡಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ನಾನು ಸಹ್ಯಾದ್ರಿ ಕಾಲೇಜಿನಲ್ಲಿ ಬಿಬಿಎಂ ಓದುವಾಗ ಶಿವಮೊಗ್ಗದಲ್ಲಿ ಭವಿಷ್ಯವಿಲ್ಲ ಎಂದು ಗಾಂಧಿಬಜಾರ್ ಸ್ನೇಹಿತರ ಜತೆ ಮಾತನಾಡುತ್ತಿದ್ದೆ. ಈಗ ಶಿವಮೊಗ್ಗದ್ದ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಉದ್ಯೋಗದ ದೃಷ್ಟಿಯಿಂದ ಏನೇನು ಬೇಕು ಎಂದು ಕಾರ್ಯಪ್ರವೃತ್ತರಾಗಿದ್ದೇವೆ. ಇನ್ನೊಂದೆರಡು ಕೈಗಾರಿಕೆ ತರಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಮಾತನಾಡಿದ್ದೇನೆ. ಡಿಆರ್‍ಡಿಒ ರಿಸರ್ಚ್ ಲ್ಯಾಬ್ ಶಿವಮೊಗ್ಗಕ್ಕೆ ದೊರೆಯಲಿದೆ ಎಂದರು.

ಕುವೆಂಪು ವಿಶ್ವವಿದ್ಯಾಲಯ ಕುಲಪತಿ ವೀರಭದ್ರಪ್ಪ, ಹೆಚ್ಚುವರಿ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್, ರಿಜಿಸ್ಟ್ರಾರ್ ಎಸ್.ಎಸ್.ಪಾಟೀಲ್, ಮೌಲ್ಯಮಾಪನ ರಿಜಿಸ್ಟ್ರಾರ್ ಪಿ.ಕಣ್ಣನ್, ಹಣಕಾಸು ಅಧಿಕಾರಿ ರಾಮಕೃಷ್ಣ, ಮೇಯರ್ ಸುವರ್ಣ ಶಂಕರ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News