ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿಗೆ ಮೀಸಲಿಟ್ಟ ಜಾಗ ಅತಿಕ್ರಮಣ ವಾರದೊಳಗೆ ತೆರವು: ದ.ಕ. ಜಿಲ್ಲಾಧಿಕಾರಿ

Update: 2021-02-22 10:50 GMT

ಮಂಗಳೂರು, ಫೆ. 22: ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿಗೆ ಮೀಸಲಿಟ್ಟ ಸರಕಾರಿ ಜಾಗ ಅತಿಕ್ರಮಣವಾಗಿರುವುದು ಕಂಡು ಬಂದಿದ್ದು, ಒಂದು ವಾರದೊಳಗೆ ಅದನ್ನು ತೆರವುಗೊಳಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ (ದಿಶಾ)ಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೆಂಜಾರಿನ ಜಾಗವನ್ನು ದುಡ್ಡು ನೀಡಿ ಖರೀದಿಸಿದ್ದು ಅದನ್ನು ಕೋಸ್ಟ್‌ಗಾರ್ಡ್ ಅಕಾಡೆಮಿಗೆ ಮೀಸಲಿಡಲಾಗಿದೆ. ಅದಕ್ಕಾಗಿ ಮತ್ತೆ ಬೇರೆ ಜಾಗ ಗುರುತಿಸಲು ಸಾಧ್ಯವಿಲ್ಲ. ಸರಕಾರದಿಂದ ಹಣ ಪಡೆದು ಸಂಬಂಧಪಟ್ಟವರು ಭೂಮಿಯನ್ನು ಭೂ ಪರಿವರ್ತನೆ ಮಾಡಿ, ಮ್ಯುಟೇಶನ್ ಮಾಡಿ ನೋಂದಣಿ ಮಾಡಿರುವುದು ಕೂಡಾ ಮಾಡಲಾಗಿರುವುದು ತಪಾಸಣೆಯಿಂದ ತಿಳಿದು ಬಂದಿದೆ. ಸರಕಾರ ಹಣ ಕೊಟ್ಟು ಪಡೆದಿರುವ ಭೂಮಿಯನ್ನು ಮತ್ತೆ ಮಾರಾಟ ನಡೆಸಿರುವುದು ಗಂಭೀರ ಪ್ರಕರಣವಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಭೂಮಿಯ ಅತಿಕ್ರಮಣದ ಬಗ್ಗೆ ಬೃಹತ್ ಪ್ರತಿಭಟನೆಗೆ ಈಗಾಗಲೇ ಸ್ಥಳೀಯರು ನಿರ್ಧರಿಸಿದ್ದಾರೆ. ಆ ಜಾಗದಲ್ಲಿ ಕೋಸ್ಟ್‌ಗಾರ್ಡ್ ಆಗಬೇಕೆಂಬುದು ಸ್ಥಳೀಯರ ಒತ್ತಾಯವೂ ಆಗಿದೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಪ್ರತಿಕ್ರಿಯಿಸಿ, ಪ್ರಸಕ್ತ ಆ ಜಾಗದಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋಶಾಲಾ ಸಂಸ್ಥೆಯು ಈ ಕುರಿತಂತೆ ಮುಖ್ಯಮಂತ್ರಿ ಹಾಗೂ ಮೇನಕಾ ಗಾಂಧಿಯನ್ನೂ ಭೇಟಿ ಮಾಡಿದ್ದಾರೆ. ನಾವೂ ಗೋವುಗಳ ಸಂರಕ್ಷಣೆಯನ್ನು ಬೆಂಬಲಿಸುವವರು. ಆದರೆ ಸರಕಾರಿ ಭೂಮಿಯ ಅತಿಕ್ರಮಣವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಹೇಳಿದರು.

ಪ್ರಸ್ತುತ ಈ ಜಾಗದಲ್ಲಿ ಗೋಶಾಲೆ ಕಾರ್ಯಾಚರಿಸುತ್ತಿರುವುದರಿಂದ ಅದಕ್ಕಾಗಿ ಪ್ರತ್ಯೇಕ ಗೋಮಾಳ ಜಾಗ ಅಗತ್ಯವಿದ್ದಲ್ಲಿ ಗುರುತಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ದಿವಾಕರ ಪಾಂಡೇಶ್ವರ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕಾ, ಡಾ. ಭರತ್ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಅಪರ ಜಿಲ್ಲಾಧಿಕಾರಿ ರೂಪಾ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News