ಕಾವೇರಿ ಹೆಚ್ಚುವರಿ ನೀರನ್ನು ತಮಿಳುನಾಡು ಬಳಸಿಕೊಳ್ಳಲು ಅವಕಾಶ ನೀಡಲ್ಲ: ಸಿಎಂ ಯಡಿಯೂರಪ್ಪ

Update: 2021-02-22 12:37 GMT

ಬೆಂಗಳೂರು, ಫೆ. 22: ಕಾವೇರಿ ನದಿ ಹೆಚ್ಚುವರಿ ನೀರನ್ನು ತಮಿಳುನಾಡು ರಾಜ್ಯ ಬಳಸಿಕೊಳ್ಳಲು ಅವಕಾಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಸಂಬಂಧ ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಇಲ್ಲಿನ ಕೆಪಿಟಿಸಿಎಲ್‍ನ ಆಡಳಿತ ಕಚೇರಿ ಶಕ್ತಿಸೌಧದಲ್ಲಿ ಬಜೆಟ್ ಪೂರ್ವಭಾವಿ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೇಳಿಕೆ ನೀಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ತಮಿಳುನಾಡು ರಾಜ್ಯವಾಗಲಿ, ಯಾರೇ ಆಗಲೀ, ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಸರಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡು ಬಳಸಿಕೊಳ್ಳದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಸಂಬಂಧ ಸರ್ವಪಕ್ಷ ಸಭೆ ಕರೆಯುವ ಸಂಬಂಧ ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯದ ಹಿತರಕ್ಷಣೆಗೆ ಸರಕಾರ ಬದ್ಧ ಎಂದು ಯಡಿಯೂರಪ್ಪ ಇದೇ ವೇಳೆ ಪ್ರಕಟಿಸಿದರು.

ಅಕ್ರಮ ನಿಲ್ಲಿಸಲು ಒತ್ತಾಯ: ‘ತಮಿಳುನಾಡು ಸರಕಾರ ಕಾವೇರಿ ನದಿ ನೀರನ್ನು ಅಕ್ರಮವಾಗಿ ಬಳಸಿಕೊಂಡು ನಿರ್ಮಿಸುತ್ತಿರುವ ನದಿಜೋಡಣೆ ಯೋಜನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಜೊತೆಯಲ್ಲಿ ಆ ರಾಜ್ಯದ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

‘ತಮಿಳುನಾಡು ಸರಕಾರ ಕಾವೇರಿ ನದಿಯ 45 ಟಿಎಂಸಿ ನೀರನ್ನು ಅಕ್ರಮವಾಗಿ ಬಳಸಿಕೊಂಡು ನದಿ ಜೋಡಣೆ ಯೋಜನೆಯನ್ನು ಶುರುಮಾಡಲು ಹೊರಟಿರುವುದು ಖಂಡನೀಯ. ಈ ಅಕ್ರಮವನ್ನು ತಕ್ಷಣ ನಿಲ್ಲಿಸಬೇಕೆಂದು ಆ ರಾಜ್ಯದ ಮುಖ್ಯಮಂತ್ರಿಯನ್ನು ಆಗ್ರಹಿಸುತ್ತೇನೆ' ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ರಾಜ್ಯಕ್ಕೆ ಮಾರಕ: ‘ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅದನ್ನು ವೈಗೈ, ವೆಲ್ಲಾರು, ಗುಂಡಾರು ನದಿಗಳಿಗೆ ಜೋಡಣೆ ಮಾಡುವ ತಮಿಳುನಾಡಿನ ಯೋಜನೆ ಮತ್ತು ಅದಕ್ಕೆ ಕೇಂದ್ರ ಸರಕಾರವೇ ಹಣಕಾಸಿನ ನೆರವು ನೀಡುತ್ತಿರುವ ವಿಚಾರ ರಾಜ್ಯ ಸರಕಾರದ ಅರಿವಿಗೆ ಬಾರದೇ ಹೋಗಿದ್ದು ಆಶ್ಚರ್ಯಕರ. ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಟೀಕಿಸಿದ್ದಾರೆ.

‘ನಾನು ಸಿಎಂ ಆಗಿದ್ದಾಗ ರೂಪಿಸಲಾದ ಮೇಕೆದಾಟು ಯೋಜನೆಗೆ ತಮಿಳುನಾಡಿನ ಎಐಎಡಿಎಂಕೆ ಸರಕಾರ ಅಡಿಗಡಿಗೂ ಕಾಡಿತು. ತನ್ನ ಮಿತ್ರ ಪಕ್ಷ ಬಿಜೆಪಿಯ ನೆರವಿನಿಂದ ಆಕ್ಷೇಪಿಸುತ್ತಲೇ ಬಂದಿತ್ತು. ಅದರ ಆತಂಕಕ್ಕೆ ಕಾರಣವಾಗಿದ್ದದ್ದು ಇದೇ ಹೆಚ್ಚುವರಿ ನೀರು. ಮೇಕೆದಾಟು ಜಲಾಶಯ ನಿರ್ಮಾಣವಾದರೆ ಹೆಚ್ಚುವರಿ ನೀರು ಅಲಭ್ಯ ಎಂಬ ಕಾರಣಕ್ಕೆ ವಿರೋಧಿಸಿತ್ತು' ಎಂದು ಹೇಳಿದ್ದಾರೆ.

‘ಈಗ ಅದೇ ಹೆಚ್ಚುವರಿ 6 ಕ್ಯೂಬಿಕ್ ಫೀಟ್ ನೀರು ಬಳಸಿಕೊಂಡು ಎಐಎಡಿಎಂಕೆ ಸರಕಾರ 342 ಕೆರೆ, 42,170 ಎಕರೆಗೆ ನೀರು ಪೂರೈಸುತ್ತಿದೆ. ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ, ಸಂಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚುವರಿ ನೀರನ್ನೂ ತಮಿಳುನಾಡು ತನ್ನ ಹಕ್ಕೆಂದು ಪ್ರತಿಪಾದಿಸುವ ಅಪಾಯವಿದೆ' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

‘ವಿಚಾರ ಈಗ ಮಾಧ್ಯಮಗಳಿಂದ ಬಹಿರಂಗವಾಗುತ್ತಲೇ ಎಚ್ಚೆತ್ತುಕೊಂಡಿರುವ ಸರಕಾರ, ಜಲಸಂಪನ್ಮೂಲ ಸಚಿವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ರಾಜ್ಯಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲು ಕೋರುವುದಾಗಿ ಹೇಳಿದ್ದಾರೆ. ರಾಜ್ಯಕ್ಕೆ ತೊಂದರೆ ಆಗದಂತೆ ಯೋಜನೆ ರೂಪಿಸುವುದು ಎಂದರೇನು? ಹೆಚ್ಚುವರಿ ನೀರೆಂಬುದು ಮುಂದೊಂದು ದಿನ ರಾಜ್ಯಕ್ಕೆ ಮಾರಕವಾಗಲಿದೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲೂ ಬಿಜೆಪಿಯದ್ದೇ ಸರಕಾರವಿದೆ. ರಾಜ್ಯದಿಂದ ಬಿಜೆಪಿಗೆ ಅತ್ಯಧಿಕ ಸಂಸದರು ಸಿಕ್ಕಿದ್ದಾರೆ. ಹೀಗಾಗಿ ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರ ಗೌರವಯುತವಾಗಿ, ನ್ಯಾಯಯುತವಾಗಿ ಕರ್ನಾಟಕದ ಹಿತ ಕಾಯಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾವೇರಿ ವಿಚಾರದಲ್ಲಿ ಬಿಸಿಮುಟ್ಟಿಸಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಇಂಥದ್ದೊಂದು ಯೋಜನೆ ಬಗ್ಗೆ ಅರಿವಿಲ್ಲದೇ ಇದ್ದದ್ದು ರಾಜ್ಯದ ಜಲಸಂಪನ್ಮೂಲ ಸಚಿವರ ವೈಫಲ್ಯವೇ ಸರಿ. ಅವರು ಚಾಲೆಂಜ್ ರಾಜಕೀಯ ಮಾಡುವುದು ಬಿಟ್ಟು, ಅವರನ್ನು ಸೋಲಿಸುತ್ತೇನೆ, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಚಾಲೆಂಜ್ ಮಾಡಲಿ. ಕನಿಷ್ಠ ಜಲಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಅದನ್ನು ಗಳಿಸಿಕೊಳ್ಳಲಿ'

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

‘ತಮಿಳುನಾಡು ಸರಕಾರ ಕಾವೇರಿ ಕಣಿವೆಯಲ್ಲಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜಿಸಿರುವ ನದಿ ಜೋಡಣೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮತ್ತು ರಾಜ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಿಎಂ ಅಧ್ಯಕ್ಷತೆಯಲಿ ಉಭಯ ಸದನಗಳ ಎಲ್ಲ ಪಕ್ಷಗಳ ಸಭಾ ನಾಯಕರೊಂದಿಗೆ ಸಮಾಲೋಚಿಸಿ, ರಾಜ್ಯದ ಹಿತಾಸಕ್ತಿ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ನಿರ್ಣಯ ತೆಗೆದುಕೊಳ್ಳಲಾಗುವುದು'

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News