ಯತ್ನಾಳ್ ಕಾಂಗ್ರೆಸ್ ಪಕ್ಷದ ‘ಬಿ ಟೀಮ್' ಎಂದ ಸಚಿವ ಮುರುಗೇಶ್ ನಿರಾಣಿ

Update: 2021-02-22 13:03 GMT

ಬೆಂಗಳೂರು, ಫೆ. 22: ‘ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಾಕತ್ತು ಇದ್ದರೆ ರಾಜೀನಾಮೆ ನೀಡಿ ಮತ್ತೊಮ್ಮೆ ಆರಿಸಿ ಬರಲಿ. ಪಂಚಮಸಾಲಿ ‘2ಎ' ಮೀಸಲಾತಿಗಾಗಿ ನಾವೇಕೆ ರಾಜೀನಾಮೆ ನೀಡಬೇಕು' ಎಂದು ಪ್ರಶ್ನಿಸಿರುವ ಸಚಿವ ಮುರುಗೇಶ್ ನಿರಾಣಿ, ‘ಕಾಂಗ್ರೆಸ್ ಪಕ್ಷದ ‘ಬಿ ಟೀಂ' ಆಗಿ ಬಸನಗೌಡ ಪಾಟೀಲ್ ಯತ್ನಾಳ್ ಕೆಲಸ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಪಂಚಮಸಾಲಿ ಸಮುದಾಯದ ಹತ್ತಕ್ಕೂ ಹೆಚ್ಚು ಮಂದಿ ಶಾಸಕರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ‘ಯತ್ನಾಳ್ ನಮ್ಮ ರಾಜೀನಾಮೆಗೆ ಆಗ್ರಹಿಸಿದ್ದಾರೆ. ನಮ್ಮನ್ನು ಆಯ್ಕೆ ಮಾಡಿರುವುದು ಕ್ಷೇತ್ರದ ಜನತೆ, ನಮ್ಮ ರಾಜೀನಾಮೆ ಕೇಳಲು ಇವರಿಗೆ ಏನು ಅಧಿಕಾರವಿದೆ' ಎಂದು ಟೀಕಿಸಿದರು.

ಯತ್ನಾಳ್ ಹೇಳಿದಂತೆ ಸ್ವಾಮೀಜಿ ತಾಳ: ‘ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ ಮಾತುಗಳನ್ನು ಕೇಳಿ, ಅವರು ಹೇಳಿದಂತೆ ತಾಳ ಹಾಕುತ್ತಿದ್ದಾರೆ. ಆದರೆ, ರಾಜ್ಯದಲ್ಲಿರುವ 80 ಲಕ್ಷ ಜನರು ಆ ಅಧಿಕಾರವನ್ನು ನಿಮಗೆ ಬರೆದುಕೊಟ್ಟಿಲ್ಲ' ಎಂದು ಶ್ರೀಗಳ ವಿರುದ್ಧ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.

‘2ಎ ಮೀಸಲಾತಿ ಕಲ್ಪಿಸಲು ಈಗಾಗಲೇ ಸರಕಾರ ಪ್ರಕ್ರಿಯೆ ಆರಂಭಿಸಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಬರುವವರೆಗೂ ಕಾಯಬೇಕು. ಈ ಕ್ಷಣದಲ್ಲೇ ಘೋಷಣೆ ಮಾಡಬೇಕೆಂದರೆ ಅದು ಕಷ್ಟಸಾಧ್ಯ. ಸರಕಾರಕ್ಕೆ ಸ್ವಾಮೀಜಿಗಳು ಕಾಲಾವಕಾಶ ನೀಡಬೇಕು' ಎಂದು ನಿರಾಣಿ ಆಗ್ರಹಿಸಿದರು.

‘ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ಕಲ್ಪಿಸದ ಕಾಶಪ್ಪನವರ ಕುಟುಂಬ ಮತ್ತು ಯತ್ನಾಳ್ ಇದೀಗ ಯಡಿಯೂರಪ್ಪನವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ' ಎಂದು ಆಕ್ಷೇಪಿಸಿದ ಅವರು, ‘ಸ್ವಾಮೀಜಿಗಳು ಕೂಡಲೇ ಧರಣಿ ಸತ್ಯಾಗ್ರಹ ಕೈ ಬಿಡಬೇಕು. ಅರಮನೆ ಮೈದಾನದಲ್ಲಿ ನಿನ್ನೆ ಜರುಗಿದ ಪಂಚಮಸಾಲಿ ಸಮಾವೇಶವಲ್ಲ, ಬದಲಿಗೆ ಅದು ಕಾಂಗ್ರೆಸ್ ಸಮಾವೇಶದಂತೆ ಆಗಿತ್ತು' ಎಂದು ಟೀಕಿಸಿದರು.

ಮಂಡಲ ಅಧ್ಯಕ್ಷನಾಗಲು ಯೋಗ್ಯತೆ ಇಲ್ಲ: ‘ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಗೆ ವಿಜಯಾನಂದ ಕಾಶಪ್ಪನವರ್ ಅನ್ನು ರಾಷ್ಟ್ರೀಯಾಧ್ಯಕ್ಷರನ್ನಾಗಿ ಯಾರೊಬ್ಬರ ಒಪ್ಪಿಗೆ ಇಲ್ಲದೆ ಘೋಷಣೆ ಮಾಡಲಾಗಿದೆ. ಆದರೆ, ಆತನಿಗೆ ಕನಿಷ್ಠ ಮಂಡಲ ಅಧ್ಯಕ್ಷನಾಗುವ ಯೋಗ್ಯತೆಯೂ ಇಲ್ಲ. ಪೊಲೀಸ್ ಅಧಿಕಾರಿಯ ಕತ್ತಿನಪಟ್ಟಿ ಹಿಡಿದು ಸುದ್ದಿಯಾಗಿದ್ದಾನೆ. ಯಾವುದೇ ಹೋರಾಟ ರಾಜಕೀಯ ರಹಿತವಾಗಿರಬೇಕು. ಪಂಚಮಸಾಲಿ ಮೀಸಲಾತಿ ಬೇಡಿಕೆಗೆ ನಾವು ಬದ್ಧ. ಲಿಂಗಾಯತ, ವೀರಶೈವ ಸೇರಿದಂತೆ ಅದ ಎಲ್ಲ ಸಣ್ಣ-ಸಣ್ಣ ಒಳಪಂಗಡಗಳಿಗೂ ಮೀಸಲಾತಿ ಸೌಲಭ್ಯ ದಕ್ಕಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮೀಸಲಾತಿ ವಿಚಾರವಾಗಿ ನಮ್ಮಲ್ಲಿ ಯಾವುದೇ ಒಡಕಿಲ್ಲ' ಎಂದು ಸ್ಪಷ್ಟನೆ ನೀಡಿದರು.

ಹೋರಾಟ ದುರ್ಬಳಕೆ: ಜಯಮೃತ್ಯುಂಜಯ ಶ್ರೀಗಳ ಪಾದಯಾತ್ರೆಯನ್ನು ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯಾನಂದ ಕಾಶಪ್ಪನವರ್ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಸ್ವಾರ್ಥ ಸಾಧನೆಗಾಗಿ ಹೋರಾಟ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಟೀಕಿಸಿದರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕಲ್ಪಿಸಲು ಕ್ರಮ ವಹಿಸಿದೆ. ಆದರೆ, ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಸ್ವಾಮೀಜಿ ತಮ್ಮ ಹೋರಾಟವನ್ನು ಹಿಂಪಡೆಯಬೇಕು. ಒಂದೆರಡು ತಿಂಗಳು ಸರಕಾರಕ್ಕೆ ಕಾಲಾವಕಾಶ ನೀಡಬೇಕು. ನಿನ್ನೆ ಅರಮನೆ ಮೈದಾನದಲ್ಲೇ ಹೋರಾಟ ಅಂತ್ಯಗೊಳಿಸಬೇಕಿತ್ತು. ಆದರೆ, ಧರಣಿ ಸತ್ಯಾಗ್ರಹ ಆರಂಭಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮುದಾಯದ ಶಾಸಕರಾದ ಮಹೇಶ್ ಕುಮಠಳ್ಳಿ, ಕಳಕಪ್ಪಬಂಡಿ, ಸಿದ್ದು ಸವದಿ, ಸಂಸದ ಕರಡಿ ಸಂಗಣ್ಣ, ಮೇಲ್ಮನೆ ಸದಸ್ಯ ಮೋಹನ್ ಲಿಂಬೀಕಾಯಿ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಚಿವರೇ ಹೇಳ್ತಾರೆ: ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ' ಮೀಸಲಾತಿ ಸಂಬಂಧ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಹೋರಾಟಕ್ಕೆ ಸಂಬಂಧಿಸಿದಂತೆ ಆ ಸಮುದಾಯದ ಸಚಿವರು ಉತ್ತರ ನೀಡಲಿದ್ದಾರೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News