ಆರ್‌ಟಿಇ ಶುಲ್ಕ ಮರುಪಾವತಿ ನಿಯಮಗಳ ಸಡಿಲಿಕೆ: ಸಚಿವ ಸುರೇಶ್ ಕುಮಾರ್

Update: 2021-02-22 13:55 GMT

ಬೆಂಗಳೂರು, ಫೆ.22: ಕೋವಿಡ್-19 ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿರುವುದರಿಂದ ಪ್ರಸ್ತುತ ವರ್ಷಕ್ಕೆ ಸೀಮಿತಗೊಳಿಸಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್‌ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತ ನಿಯಮಗಳಲ್ಲಿ ವಿನಾಯಿತಿ ನೀಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. 

ಕೊರೋನ ಹಿನ್ನೆಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆಯೆ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸೆಸೆಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್‌ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯ್ತಿ ನೀಡಬೇಕೆಂದು ಅವರು ಸೂಚಿಸಿದ್ದಾರೆ.

ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಾಖಲಾತಿ ಮತ್ತು ಹಾಜರಾತಿಗಳ ಆಧಾರದಲ್ಲಿ ಶಾಲೆಗಳ ಮಾನ್ಯತೆ ನವೀಕರಿಸುವ ಮೂಲಕ ವಿದ್ಯಾರ್ಥಿಗಳ ಆರ್‌ಟಿಇ ಶುಲ್ಕ ಮರುಪಾವತಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸಾಮಾನ್ಯ ಪ್ರಕ್ರಿಯೆಗಳಾಗಿವೆ ಎಂದು ಅವರು ಹೇಳಿದ್ದಾರೆ.

ಆದರೆ ಈ ವರ್ಷ ಕೊರೋನ ಹಿನ್ನೆಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದೆ. ಹಾಗೆಯೇ ಹಾಜರಾತಿಯೂ ಕಡಿಮೆ ಇದೆ. ಅಲ್ಲದೇ ಇಲಾಖೆಯೆ ಹಾಜರಾತಿಗೆ ವಿನಾಯಿತಿ ನೀಡಿದೆ. ಹೀಗಿರುವಾಗ ಖಾಸಗಿ ಅನುದಾನ ರಹಿತ ಶಾಲೆಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಶೈಕ್ಞಣಿಕ ವರ್ಷಕ್ಕೆ ಸೀಮಿತಗೊಳಿಸಿ ಈ ನಿಟ್ಟಿನಲ್ಲಿ ವಿನಾಯಿತಿ ನೀಡುವುದು ಮತ್ತು ಉಳಿದ ಷರತ್ತುಗಳನ್ನು ಖಚಿತಪಡಿಸಿಕೊಂಡು ಕ್ರಮ ವಹಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸುರೇಶ್ ಕುಮಾರ್ ಟಿಪ್ಟಣಿಯಲ್ಲಿ ಸೂಚಿಸಿದ್ದಾರೆ.

ಸರಕಾರದ ಈ ಕ್ರಮದಿಂದಾಗಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮತ್ತು ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿಗೆ ಇದ್ದ ಹಾಜರಾತಿ/ದಾಖಲಾತಿ ಸಂಖ್ಯೆ ಕುರಿತ ನಿಯಮ ಸಡಿಲಿಕೆಯಿಂದ ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದಂತೆ ನಿರಾಳತೆ ಬಂದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News