ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ವಾಗ್ದಾಳಿ
ಬೆಂಗಳೂರು, ಫೆ.22: ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ದಿನ(ಜ.26)ದಂದು ನಡೆದ ಹಿಂಸಾಚಾರದ ಹಿಂದೆ ದಲ್ಲಾಳಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷಗಳು, ದೇಶವಿರೋಧಿ ಖಲಿಸ್ತಾನಿ ಶಕ್ತಿಗಳಿವೆ. ಇದೆಲ್ಲವೂ ತಿಳಿದಿದ್ದರೂ ರಾಜ್ಯಸಭೆಯ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕಾಗಿ ದಿಲ್ಲಿ ದಂಗೆ ಹಿಂದೆ ಬಿಜೆಪಿ ಒಳಸಂಚಿದೆ ಎಂದು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಅವರ ಪಕ್ಷದವರೆ ಕಾರಣ ಎಂಬುದನ್ನು ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ತಿಳಿಸಿದೆ. ಕಾಂಗ್ರೆಸ್‍ನಲ್ಲಿ ನಾಯಕರೇ ಇಲ್ಲದ ದುಸ್ಥಿತಿ ಇದೆ. ಕುಟುಂಬ ರಾಜಕೀಯಕ್ಕೆ ಜೋತುಬಿದ್ದ ಆ ಪಕ್ಷವು ಅನಿವಾರ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ವಿರೋಧ ಪಕ್ಷದ ಮುಖಂಡನ ಸ್ಥಾನಮಾನ ನೀಡಿದೆ. ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳಿತು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಗಣರಾಜ್ಯೋತ್ಸವದ ದಿನದಂದು ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುವುದನ್ನು ಕಾಂಗ್ರೆಸ್ ಪಕ್ಷ ನಿರೀಕ್ಷಿಸಿತ್ತು. ಆ ಗಲಭೆ, ಆಗುವ ಹಾನಿಗೆ ಪೊಲೀಸರು ಮತ್ತು ಪೊಲೀಸ್ ವ್ಯವಸ್ಥೆಯನ್ನು ನಿಯಂತ್ರಿಸುವ ಕೇಂದ್ರ ಸರಕಾರವೇ ಕಾರಣ ಎಂದು ದೂರುವ ಉದ್ದೇಶ ಕಾಂಗ್ರೆಸ್ ಪಕ್ಷಕ್ಕೆ ಇತ್ತು ಎಂಬುದು ಖರ್ಗೆ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಒಳಜಗಳದ ಕಾರಣಕ್ಕಾಗಿ ಎಲ್ಲೆಡೆ ಸೋಲುತ್ತಿದೆ. ಆದರೂ ಕರ್ನಾಟಕದಲ್ಲಿ ಗೆದ್ದು ಅಧಿಕಾರಕ್ಕೇರುವ ಹಗಲುಗನಸನ್ನು ಆ ಪಕ್ಷದ ನಾಯಕರು ಬಿಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯಿಂದ ಕಾಂಗ್ರೆಸ್ ಪಕ್ಷ ನಿರಂತರವಾಗಿ ನೆಲಕಚ್ಚುತ್ತಿರುವುದನ್ನು ಗಮನಿಸಿ ಕೇವಲ ಪ್ರಚಾರದ ದೃಷ್ಟಿಯಿಂದ ಖರ್ಗೆಯವರು ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದು ನಳಿನ್ ಕುಮಾರ್ ಕಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.