ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ: ಎರಡು ಹಸುಗಳು ಬಲಿ; ಮೂರ್ಛೆ ಹೋದ ಬಾಲಕಿ

Update: 2021-02-22 14:49 GMT

ಮಡಿಕೇರಿ, ಫೆ.22: ದಕ್ಷಿಣ ಕೊಡಗಿನ ಶ್ರೀಮಂಗಲದ ಮಂಚಳ್ಳಿ ಎಂಬಲ್ಲಿ ರವಿವಾರ ಹುಲಿಯೊಂದು ಸೆರೆಯಾದ ಬೆನ್ನಲ್ಲೇ ಮತ್ತೆ ಇಂದು ಹುಲಿ ದಾಳಿಯಿಂದ ಎರಡು ಹಸುಗಳು ಸಾವನ್ನಪ್ಪಿದ ಘಟನೆ ಇದೇ ಪ್ರದೇಶದ ತಾವಳಗೇರಿ ಗ್ರಾಮದಲ್ಲಿ ನಡೆದಿದೆ. ಬಾಲಕಿಯೊಬ್ಬಳು ಹುಲಿಯನ್ನು ಕಂಡು ಮೂರ್ಛೆ ಹೋದ ಘಟನೆಯೂ ಪೊನ್ನಂಪೇಟೆಯ ಮತ್ತೂರು ಗ್ರಾಮದಲ್ಲಿ ನಡೆದಿದೆ.

ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ ಸಂದರ್ಭ ನಿಶಕ್ತ ಹುಲಿಯೊಂದು ರವಿವಾರ ಸೆರೆಯಾಗಿತ್ತು. ಮಾನವ ಜೀವ ಬಲಿ ಪಡೆದ ಹುಲಿ ಇದಲ್ಲ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ತಾವಳಗೇರಿ ಮತ್ತು ಮತ್ತೂರು ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ಇಂದು ಬೆಳಗ್ಗೆ ಮತ್ತೆ ಎರಡು ಹಸುಗಳು ಹುಲಿ ದಾಳಿಗೆ ಬಲಿಯಾದ ಬೆನ್ನಲ್ಲೇ ಮಾನವ ಜೀವ ಬಲಿ ಪಡೆದ ಹುಲಿಯನ್ನು ಸೆರೆ ಹಿಡಿಯದೆ ಬೇರೆ ಯಾವುದೋ ನಿಶಕ್ತ ಹುಲಿಯನ್ನು ಹಿಡಿಯಲಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ನೇತೃತ್ವದಲ್ಲಿ ವಿರಾಜಪೇಟೆ ಡಿಸಿಎಫ್ ಚಕ್ರಪಾಣಿ ಹಾಗೂ ಅಧಿಕಾರಿಗಳ ತಂಡ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಕೃಷ್ಣ ಹಾಗೂ ಮಹೇಂದ್ರ ಸಹಕಾರದೊಂದಿಗೆ ಇಂದು ಕೂಡ ಮತ್ತೊಂದು ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಿದರು. ಆದರೆ ಕಾರ್ಯಾಚರಣೆಯ ತಂಡಕ್ಕೆ ಯಾವುದೇ ಹುಲಿ ಗೋಚರಿಸಿಲ್ಲ ಮತ್ತು ರವಿವಾರ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲೂ ಹುಲಿ ಸೆರೆಯಾಗಿಲ್ಲ. ಮಂಗಳವಾರ ಮತ್ತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಆತಂಕ
ಶ್ರೀಮಂಗಲ, ಟಿ.ಶೆಟ್ಟಿಗೇರಿ, ಕುಮಟೂರು, ಬೆಳ್ಳೂರು, ಹರಿಹರ, ಕಾಕೂರು, ಹೇರ್ಮಾಡು ಇತ್ಯಾದಿ ಕಡೆಗಳಲ್ಲಿ ನಿಧಾನ ಗತಿಯ ಕಾಫಿ ಕೊಯ್ಲು ಹಾಗೂ ಕಾಳು ಮೆಣಸು ಕೊಯ್ಲು ನಡೆಯುತ್ತಿದ್ದು ಇದೀಗ ವ್ಯಾಘ್ರನ ಭಯದಿಂದಾಗಿ ಈ ಭಾಗದ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳು, ಕೃಷಿಕರ ತೋಟದ ಕಾಲು ದಾರಿಯಲ್ಲಿ ಓಡಾಡಲು ಭಯ ಬೀಳುವಂತಾಗಿದೆ. ಒಂದೇ ಹುಲಿ ಇದೀಗ ನರಹಂತಕನಾಗಿ ಪರಿವರ್ತನೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಫೆ.23ರವರೆಗೆ ಕಾರ್ಯಾಚರಣೆ ಮುಂದುವರಿಯಲಿದ್ದು, ಈ ವ್ಯಾಪ್ತಿಯ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಗ್ರಾಮಸ್ಥರು ಕೂಡ ತೋಟ, ಗದ್ದೆಗಳ ಕಡೆ ತೆರಳದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದು, ಹುಲಿಯನ್ನು ಕಂಡಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಮತ್ತು ವನ್ಯಜೀವಿ ಪಶುವೈದ್ಯ ಮುಜೀಬ್ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿ ಸೋಮವಾರವೂ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಕಾರ್ಯಾಚರಣೆಗೆ ನಾಗರಹೊಳೆ ಹುಲಿ ಯೋಜನೆ, ಕೊಡಗು ವೃತ್ತದ 100ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ, ಶ್ರೀಮಂಗಲ ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷ ಎಂ.ಟಿ.ಕಾರ್ಯಪ್ಪ, ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಟ್ಟಿ ಮಂದಯ್ಯ, ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು, ಅನೀಶ್ ಮಾದಪ್ಪ, ಕುಟ್ಟ ಕೊಡವ ಸಮಾಜ ಅಧ್ಯಕ್ಷ ವಿಷ್ಣು ಕಾರ್ಯಪ್ಪ, ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷ ಅಜ್ಜಮಾಡ ಜಯ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಾಮಾಡ ಸುಮಂತ್, ಜಿ.ಪಂ. ಸದಸ್ಯ ಶಿವು ಮಾದಪ್ಪ, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಮತ್ತಿತ್ತರ ಪ್ರಮುಖರು ಮಾನವ ವನ್ಯಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News