ಅನ್ನಭಾಗ್ಯ ಯೋಜನೆ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ, 6 ಮಂದಿ ವಿರುದ್ಧ ಪ್ರಕರಣ ದಾಖಲು
ಶಿವಮೊಗ್ಗ, ಫೆ.22: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ಆರು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕೋಟೆ ಠಾಣೆ ಇನ್‍ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಶಂಕರಮಠ ಸರ್ಕಲ್ ಬಳಿ ತಪಾಸಣೆ ನಡೆಸಲಾಯಿತು. ಸಂಗೊಳ್ಳಿ ರಾಯಣ್ಣ ಸರ್ಕಲ್‍ನಿಂದ ಬಿ.ಹೆಚ್.ರಸ್ತೆಗೆ ಬರುತ್ತಿದ್ದ ಮ್ಯಾಕ್ಸಿ ಟ್ರಕ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ವಾಹನದಲ್ಲಿ 2750 ಕೆ.ಜಿ.ಅಕ್ಕಿ ಇರುವುದು ಪತ್ತೆಯಾಗಿದೆ. ಅನ್ನ ಭಾಗ್ಯ ಯೋಜನೆಗೆ ಸೇರಿದ 68,750 ರೂ. ಮೌಲ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಮ್ಯಾಕ್ಸಿ ಟ್ರಕ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಬಳಿಕ ಚಾಲಕ, ವಾಹನದ ಮಾಲಕ, ಅಂಗಡಿಯೊಂದರ ಮಾಲಕ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.