ವಿದೇಶದಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ

Update: 2021-02-22 15:33 GMT

ಬೆಂಗಳೂರು, ಫೆ.22: ದೇಶದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ದೇಶಗಳಿಂದ ಬರುವ ಪ್ರಯಾಣಿಕರನ್ನು 14 ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ಗೆ ಒಳಪಡಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಇಂದಿನಿಂದ ಮುಂದಿನ ಆದೇಶದವರೆಗೆ ಈ ನಿಯಮ ಪಾಲನೆಗಳು ಕಡ್ಡಾಯವಾಗಿದ್ದು, ಹೊಸ ಕೋವಿಡ್ ಮಾರ್ಗಸೂಚಿಗಳು ಕೆಳಗಿನಂತಿವೆ.

ಕೋವಿಡ್-19 ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಿ ಕೊರೋನ ನೆಗೆಟಿವ್ ವರದಿಯನ್ನು www.newdelhiairport.in ಆನ್‍ಲೈನ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಎಲ್ಲ ಅಂತರ್‌ರಾಷ್ಟ್ರೀಯ ಪ್ರಯಾಣಿಕರು, ಪ್ರಯಾಣಕ್ಕೂ ಮೊದಲು ಆನ್‍ಲೈನ್ ಏರ್ ಸುವಿಧಾ ಪೋರ್ಟಲ್‍ನಲ್ಲಿ ಕೋವಿಡ್ ಸೋಂಕು ಪರೀಕ್ಷೆಯ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.

ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ಕೊರೋನ ಪರೀಕ್ಷೆ ನಡೆಸಿರಬೇಕು. ಜೊತೆಗೆ ಪ್ರಯಾಣಿಕರು ವರದಿಯನ್ನು ಪ್ರಮಾಣೀಕರಿಸಬೇಕು. ವಿಮಾನ ಪ್ರಯಾಣಕ್ಕೂ ಮೊದಲು ಪ್ರತಿಯೊಬ್ಬ ಪ್ರಯಾಣಿಕನ ತಾಪಮಾನ ಪರೀಕ್ಷೆ ನಡೆಸಲಾಗುತ್ತದೆ. ರೋಗಲಕ್ಷಣಗಳಿಲ್ಲದ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ನಡೆಸಲು ಅನುಮತಿ ನೀಡಲಾಗುತ್ತದೆ.

ವಿಮಾನದಲ್ಲಿ ಪ್ರಯಾಣಿಕರಿಗೆ ಮಾಸ್ಕ್, ಸುರಕ್ಷಿತ ಅಂತರ ಕಡ್ಡಾಯವಾಗಿರುತ್ತದೆ. ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು. ವಿಮಾನಯಾನದ ಹೊರತಾಗಿ ಜಲಮಾರ್ಗ, ಭೂಮಾರ್ಗದ ಮೂಲಕ ದೇಶಕ್ಕೆ ಆಗಮಿಸುವ ಅಂತರ್‍ರಾಷ್ಟ್ರೀಯ ಪ್ರಯಾಣಿಕರಿಗೆ ಕೂಡ ಕೋವಿಡ್ 19 ಮಾರ್ಗಸೂಚಿ ಅನ್ವಯವಾಗುತ್ತದೆ.

ಯುನೈಟೈಡ್ ಕಿಂಗ್‍ಡಂ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಏರ್‍ಲೈನ್ ಪ್ರತ್ಯೇಕವಾಗಿ ಗುರುತಿಸಬೇಕು ಎಂದು ಕೂಡ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News