ಯತ್ನಾಳ್ ಪ್ರಖರ ಹಿಂದುತ್ವವಾದಿ ನಿಜ. ಆದರೆ...: ಸ್ವಪಕ್ಷದ ಶಾಸಕನ ಬಗ್ಗೆ ಈಶ್ವರಪ್ಪ ಹೇಳಿದ್ದೇನು ?

Update: 2021-02-22 15:49 GMT

ಶಿವಮೊಗ್ಗ,ಫೆ.22: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದಾಖಲೆ ಸಮೇತ 11 ಪುಟದ ಉತ್ತರವನ್ನು ಹೈಕಮಾಂಡ್ ಗೆ ನೀಡಿದ್ದಾರೆ. ಇವರ ಉತ್ತರ ನೋಡಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ಕೊಡುವುದು ಸರಿಯಲ್ಲ. ಅದನ್ನು ಒಪ್ಪಲು ಸಾಧ್ಯವಿಲ್ಲ. ಯತ್ನಾಳ್ ಪ್ರಖರ ಹಿಂದುತ್ವವಾದಿ ನಿಜ. ಆದರೆ ಏನೇ ವಿಚಾರವಿರಲಿ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಕಂಡಕಂಡಲ್ಲಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಯತ್ನಾಳ್ ಬಗ್ಗೆ ಬಿಜೆಪಿ ರಾಜ್ಯ ಸಮಿತಿಯಿಂದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಆದರೆ ಕೇಂದ್ರ ನಾಯಕರು ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟೀಸ್ ಗೆ ಪ್ರತಿಕ್ರಿಯಿಸಿರುವ ಅವರು, ವಿಜಯೇಂದ್ರ, ಸಿಎಂ ಬಗ್ಗೆ ಯತ್ನಾಳ್ ಕಂಪ್ಲೇಂಟ್ ಮಾಡಿದ್ದಾರೆ. ಯತ್ನಾಳ್ ಬಳಿ ಡಾಕ್ಯುಮೆಂಟ್ ಏನಿದೆಯೋ ನೋಡೋಣ. ಯತ್ನಾಳ್ ಕೇಂದ್ರ ನಾಯಕರಿಗೆ ಡಾಕ್ಯುಮೆಂಟ್ ಸಹಿತ ಹೈಕಮಾಂಡ್ ಗೆ ಹನ್ನೊಂದು ಪುಟದ ಉತ್ತರ ನೀಡಿದ್ದೇನೆ ಎಂದಿದ್ದಾರೆ. ಇವರ ಉತ್ತರ ನೋಡಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ ಎಂದರು.

ಐಎಂಎ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಬಿಐ ತಗೆದುಕೊಳ್ಳುತ್ತಿರುವ ಬಗ್ಗೆ ನಾನು ರಾಜಕೀಯವಾಗಿ ತೆಗೆದುಕೊಳ್ಳುವುದಿಲ್ಲ. ಐಎಂಎಯಿಂದ ಸಿದ್ದರಾಮಯ್ಯ, ಕುಮಾರಸ್ವಾಮಿ, ಆರ್.ವಿ.ದೇಶಪಾಂಡೆ, ಪರಮೇಶ್ವರ್ ಅವರಿಗೂ ಹಣ ಬಂದಿದೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಒಂದು ವೇಳೆ ತಪ್ಪು ಮಾಡಿದ್ದರೆ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಅಷ್ಟೇ ಎಂದರು.

ಮೀಸಲಾತಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಹಲವು ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಯಾವ ಸಮಾಜಕ್ಕೆ ಅರ್ಹತೆ ಇದೆಯೋ ಅವರಿಗೆ ಮೀಸಲಾತಿ ನೀಡಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಇಂದು ಸ್ವಾಮೀಜಿಗಳು ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವುದು ಸ್ವಾಗತಾರ್ಹ ವಿಷಯ ಎಂದರು.

ಹುಣಸೋಡು ಸ್ಫೋಟ ಪ್ರಕರಣದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದು ಒಂದು ತಿಂಗಳು ಆಗಿದೆ. ಸ್ಫೋಟ ಪ್ರಕರಣದ ತನಿಖೆ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಪ್ರಕರಣ ಕುರಿತು ಮಾಹಿತಿ ಪಡೆಯಲು ತನಿಖಾಧಿಕಾರಿಗಳು ಜಿಲ್ಲಾಧಿಕಾರಿಯನ್ನು ಕರೆದಿದ್ದಾರೆ. ಯಾವಾಗ ವರದಿ ಬರುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News