‘ಜಾನಪದ ವಿವಿ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ತರಲು ಚಿಂತನೆ: ಅರವಿಂದ ಲಿಂಬಾವಳಿ

Update: 2021-02-22 17:06 GMT

ಬೆಂಗಳೂರು, ಫೆ.22: ಜಾನಪದ ವಿಶ್ವವಿದ್ಯಾಲಯವು ಸೇರಿದಂತೆ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಕನ್ನಡ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ ಹಾಗೂ ಲಲಿತ ಕಲಾ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಪ್ರಾಧಿಕಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ತರಲು ಚಿಂತನೆ ನಡೆದಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಸೋಮವಾರ ನಗರದ ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಗೌರವ ಸದಸ್ಯತ್ವ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಗಳು, ಕಲಾವಿದರು ಮತ್ತು ಅವರ ಅಧ್ಯಯನ ಒಂದು ಸೂರಿನಡಿ ಬಂದರೆ, ಅದರಿಂದ ಭಾಷೆಯ ಬೆಳವಣಿಗೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ, ಆದಕಾರಣ ಇಂತಹ ಒಂದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಜನ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಮಗ್ನರಾಗಿದ್ದಾರೆ. ಹಾಗಾಗಿ ಬರಹಗಾರರು ಇ ಬುಕ್ ಮತ್ತು ಕಿಂಡಲ್ ಮುಂತಾದ ಎಲೆಕ್ಟ್ರಾನಿಕ್ ಸಾಧನಗಳನ್ನು ಹೆಚ್ಚಾಗಿ ಬಳಸಬೇಕಾಗಿದೆ, ಸಾಹಿತ್ಯವನ್ನು ದೃಶ್ಯ ಮಾಧ್ಯಮದ ಮೂಲಕ ಹೇಳುವ ಕಲೆ ರೂಢಿಸಿಕೊಳ್ಳಬೇಕಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಸರಕಾರ ಸಾಹಿತ್ಯ ಪರಿಷತ್ತಿಗೆ ಹಿಂದೆಂದಿಗಿಂತಲೂ ಹೆಚ್ಚು ಅನುದಾನವನ್ನು ನೀಡುತ್ತಿದೆ ಎಂದರು.

ಸಾಹಿತಿಗಳಾದ ಡಾ.ಗೊ.ರು.ಚನ್ನಬಸಪ್ಪ, ಡಾ.ದೊಡ್ಡರಂಗೇಗೌಡ, ಡಾ.ಹಂಪನಾಗರಾಜಯ್ಯ ಮತ್ತು ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು. ಈ ಗೌರವ ಸದಸ್ಯತ್ವ ಒಂದು ಲಕ್ಷ ರೂಪಾಯಿ ನಗದು ಹಾಗೂ ತಾಮ್ರ ಫಲಕ ಒಳಗೊಂಡಿದೆ.

ಸಮಾರಂಭದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರನ್ನು ಸಚಿವ ಅರವಿಂದ ಲಿಂಬಾವಳಿ ವಿಶೇಷವಾಗಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News