ಸಚಿವರು ರಾಜೀನಾಮೆ ಬಗ್ಗೆ ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ: ಸಚಿವ ಬಿ.ಸಿ.ಪಾಟೀಲ್

Update: 2021-02-22 17:22 GMT

ವಿಜಯಪುರ, ಫೆ.22: ಮುಖ್ಯಮಂತ್ರಿ ಸ್ಥಾನ ಗೌರವಯುತವಾದ ಸ್ಥಾನವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಎಲ್ಲರೂ ಗೌರವ ನೀಡಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಸೋಮವಾರ ವಿಜಯಪುರ ತಾಲೂಕಿನ ಇಟ್ಟಂಗಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಷ್ಟೇ ಭಾಗವಹಿಸಿಲ್ಲ. ಬೇರೆ ಬೇರೆ ಸಮುದಾಯದವರೂ ಭಾಗವಹಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನ ಗೌರವಯುತ ಸ್ಥಾನ, ಅದಕ್ಕೆ ಗೌರವ ಕೊಡಬೇಕು ಎಂದರು.

ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ದಿಲ್ಲಿಗೆ ಅವರನ್ನು ಏಕೆ ಕರೆಯಿಸಿಕೊಂಡರು ಎಂಬುದನ್ನು ಯತ್ನಾಳ್ ಅವರಿಗೆ ಕೇಳಬೇಕು. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಯತ್ನಾಳ್‍ರನ್ನು ದಿಲ್ಲಿಗೆ ಕರೆದಿದ್ದರೆ ಅಲ್ಲಿಗೆ ಹೋದ ಬಳಿಕ ಅವರೇ ಪ್ರೆಸ್ ಮೀಟ್ ಮಾಡಿ ವಿಷಯ ಹೇಳಬೇಕು. ರಾಜೀನಾಮೆ ಕೊಡುವವರು ಅದಕ್ಕೆ ಬದ್ಧರಾಗಿರಬೇಕು. ಯತ್ನಾಳ್ ಹೇಳಿದ ಮಾತ್ರಕ್ಕೆ ರಾಜೀನಾಮೆ ಕೊಡಬೇಕು ಎಂಬುದೇನಿಲ್ಲ. ಇದು ಜಾತ್ಯತೀತ ರಾಷ್ಟ್ರ, ಅವರವರ ಸಮುದಾಯಗಳಿಗೆ ಬೇಡಿಕೆ ಸಲ್ಲಿಸುವುದು ಅವರವರ ಹಕ್ಕು ಎಂದ ಮಾತ್ರಕ್ಕೆ ಈ ರೀತಿ ಬೇರೆಯವರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಬಬಲೇಶ್ವರ ಮತಕ್ಷೇತ್ರದ ಇಟ್ಟಂಗಿಹಾಳ ಫುಡ್ ಪಾರ್ಕ್ ನಿಯೋಜಿತ ಸ್ಥಳಕ್ಕೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ಮುಂಬರುವ ಬಜೆಟ್‍ನಲ್ಲಿ ಇಟ್ಟಂಗಿಹಾಳ ಫುಡ್ ಪಾರ್ಕ್‍ಗೆ ಸೂಕ್ತ ಅನುದಾನ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್, ಜಿ.ಪಂ.ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಬೀಜ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡಾ ಪಾಟೀಲ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News