ಪಠ್ಯ ಬೋಧಿಸದಂತೆ ಆದೇಶ: ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಪ್ರಗತಿಪರರ ಪ್ರತಿಭಟನೆ

Update: 2021-02-22 17:47 GMT

ಮೈಸೂರು,ಫೆ.22: ರಾಜ್ಯ ಸರ್ಕಾರ 6ನೇ ತರಗತಿಯ ಪಠ್ಯಪುಸ್ತಕದಲ್ಲಿ ಬೌದ್ಧ ಹಾಗೂ ಜೈನ ಧರ್ಮದ ಐತಿಹಾಸಿಕ ಅಂಶಗಳನ್ನು ತೆಗೆದಿರುವುದನ್ನು ಖಂಡಿಸಿ ವಿಶ್ವ ಮೈತ್ರಿ ಬುದ್ಧ ವಿಹಾರ ವೇದಿಕೆ ಹಾಗೂ ಪ್ರಗತಿಪರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಬಲ್ಲಾಳ್ ವೃತ್ತದಲ್ಲಿರುವ ಬುದ್ಧ ವಿಹಾರದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ಭಾಗ 1ರಲ್ಲಿ ಇರುವ ಪಾಠ 7ರ ಹೊಸ ಧರ್ಮಗಳ ಉದಯ ವಿಷಯವನ್ನು ಬೋಧನೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಸುತ್ತೋಲೆ ಹೊರಡಿಸಿರುವುದು ಅಕ್ಷಮ್ಯ ಅಪರಾಧ. ಬೌದ್ಧ ಮತ್ತು ಜೈನ ಧರ್ಮದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸದೆ ವಂಚಿಸಲು ಯತ್ನಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸರ್ಕಾರ ರಚನೆ ಆಗಿರುವುದು ಇತಿಹಾಸವನ್ನು ತಿರುಚಲು ಅಲ್ಲ. ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕಾಗಿ. ಆ ಕೆಲಸವನ್ನು ಮಾಡದೆ ಮೂರನೇ ದರ್ಜೆಯ ಜನರನ್ನು ಬಿಟ್ಟು ಇತಿಹಾಸವನ್ನು ತಿರುಚುತ್ತಾ ಬಹುಸಂಸ್ಕೃತಿಯ ಜನರ ಮೇಲೆ ಯುದ್ಧ ಘೋಷಣೆಯಂತೆ ಸರ್ಕಾರವೇ ದಾಳಿ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಮಾನವ ವಿರೋಧಿ ನಿಲುವನ್ನು ಖಂಡಿಸಿ ಮಾನವೀಯತೆಯನ್ನು ಸಾರಿದ ಬುದ್ಧ ಮತ್ತು ಜೈನ ಧರ್ಮದ ನೈತಿಕ ಪ್ರಜ್ಞೆಯನ್ನು ಆಕ್ಷೇಪಾರ್ಹ ಎಂದು ಪರಿಗಣಿಸಿ ಶಾಲಾ ಪಠ್ಯಪುಸ್ತಕಗಳಿಂದ ತೆಗೆದಿರುವುದನ್ನು ವಿರೋಧಿಸುತ್ತೇವೆ ಎಂದರು

ಬಹು ಜನರು ಸತ್ತಿಲ್ಲ. ಇನ್ನೂ ಮೌಢ್ಯ ತುಂಬಿದ ನಿದ್ರಾವಸ್ಥೆಯಲ್ಲೇ ಇದ್ದಾರೆ. ಆ ಜನರ ಮೇಲೆ ಇತಿಹಾಸದುದ್ದಕ್ಕೂ ದಾಳಿ ಮಾಡುತ್ತಿರುವ ಮನುಸ್ಮೃತಿ, ಭಗವದ್ಗೀತೆ, ಹದಿನೆಂಟು ಪುರಾಣಗಳನ್ನು ಮೊದಲು ನಿಷೇಧಿಸಿ. ಈ ಕೃತಿಗಳಿಂದ ಪ್ರೇರಣೆಗೊಂಡ ಕೆಲವು ಜನರು ಮತ್ತು ಸಂವಿಧಾನ ವಿರೋಧಿ ಸಂಘಟನೆಗಳು ಜಾತೀಯತೆ, ಅಸ್ಪೃಶ್ಯತೆ, ಲೈಂಗಿಕ ದೌರ್ಜನ್ಯ ಹಲ್ಲೆ, ಗುಂಪು ಹಲ್ಲೆ ಕೊಲೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದು ಸಾಮಾಜಿಕ ಸತ್ಯ. ಈ ಧಾರ್ಮಿಕ ಕೃತಿಗಳ ಬಗ್ಗೆ ಸರ್ಕಾರ ಗಮನ ಹರಿಸಲಿ. ಜನರ ಅಸಹಾಯಕತೆಯ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವುದು ಖಂಡನೀಯವಷ್ಟೇ ಅಲ್ಲ. ನಾಚಿಕೆಗೇಡಿನ ವಿಷಯ. ಶಿಕ್ಷಣ ಇಲಾಖೆಯೂ ಕತ್ತರಿ ಪ್ರಯೋಗ ಮಾಡಿರುವ ಅಂಶಗಳನ್ನು ಮತ್ತೆ ಸೇರಿಸುವಂತೆ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು. ಫೆ.17ರ ಸುತ್ತೋಲೆಯನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಸಾಹಿತಿಗಳಾದ ಡಾ.ಮುನಿವೆಂಕಟಪ್ಪ, ಸಿದ್ಧಸ್ವಾಮಿ, ಮಾಜಿ ಉಪಮೇಯರ್ ಶೈಲೇಂದ್ರ, ದಲಿತ ವೆಲ್‍ಫೇರ್ ಟ್ರಸ್ಟ್ ಶಿವಸ್ವಾಮಿ, ಯುವ ಮುಖಂಡ ಪುನೀತ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಯಾರೋ ಸ್ವಾಮೀಜಿ ಹೇಳಿದರೂ ಎಂದು ಹಾಗೂ ವೈದಿಕ ಶಾಹಿಗಳಿಗೆ ವಿರುದ್ಧವಾಗಿದೆ ಎಂದು ಬೌದ್ಧ ಹಾಗೂ ಜೈನ ಧರ್ಮದ ವಿಷಯಗಳನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಲು ಹೊರಟಿರುವುದು ಖಂಡನೀಯ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ. ಅವರು ರಾಜ್ಯದ ಸಚಿವರಾಗದೆ ಮನುವಾದಿಗಳ ಸಚಿವರಾಗಿದ್ದಾರೆ.
-ಪುರುಷೋತ್ತಮ್, ಮಾಜಿ ಮೇಯರ್

ಒಂದು ಕಡೆ ಬುದ್ಧ ವಿಹಾರಗಳು ತಲೆ ಎತ್ತುತಿದ್ದರೆ ಮತ್ತೊಂದು ಕಡೆ ವೈದಿಕ ಶಾಹಿಗಳು ನಿರ್ನಾಮ ಮಾಡಲು ಹೊರಟಿವೆ. ಶಿಕ್ಷಣ ಸಚಿವ ವೈದಿಕ ಶಾಹಿಯ ಮರಿಯಾಗಿದ್ದಾರೆ. ಅವರು ಮೇಲ್ನೋಟಕ್ಕೆ ಮಾತನಾಡಿದರೂ ಒಳಗೆ ವೈದಿಕ ಮನೋಭಾವವನ್ನು ತುಂಬಿಕೊಂಡಿದ್ದಾರೆ. ಇವರು ಶಿಕ್ಷಣ ಸಚಿವರಾಗಿರಲು ಯೋಗ್ಯರಲ್ಲ.
-ಡಾ.ಮುನಿವೆಂಕಟಪ್ಪ, ಹಿರಿಯ ಸಾಹಿತಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News