ಸದನದಿಂದ ಮಾಧ್ಯಮಗಳನ್ನು ದೂರವಿಡುವುದಿಲ್ಲ: ಪರಿಷತ್ ಸಭಾಪತಿ ಹೊರಟ್ಟಿ

Update: 2021-02-23 15:14 GMT

ಬೆಂಗಳೂರು, ಫೆ.23: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇರಬೇಕು. ಆದುದರಿಂದ, ನಮ್ಮ ಸದನದಿಂದ ಮಾಧ್ಯಮಗಳನ್ನು ದೂರವಿಡುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದನದ ಕಲಾಪದ ಸಂದರ್ಭದಲ್ಲಿ ನಡೆಯುವ ಕೆಲವು ಸಣ್ಣಪುಟ್ಟ ಘಟನಾವಳಿಗಳನ್ನೆ ಮಾಧ್ಯಮಗಳು ಇಡೀ ದಿನ ಪ್ರಸಾರ ಮಾಡುವುದರಿಂದ, ಸದನದ ಗೌರವ, ಘನತೆಗೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜ್ವಲಂತ ಸಮಸ್ಯೆಗಳ ಬಗ್ಗೆ ಸದಸ್ಯರು ಸದನದಲ್ಲಿ ಚರ್ಚೆ ಮಾಡಲು ಸಿದ್ಧತೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಜನರ ಪರವಾಗಿ ನಡೆಯುವಂತಹ ಚರ್ಚೆಗಳನ್ನು ಮಾಧ್ಯಮಗಳಲ್ಲಿ ಆದ್ಯತೆ ಮೇರೆಗೆ ಪ್ರಸಾರ ಮಾಡಿದರೆ, ಜನಸಾಮಾನ್ಯರಿಗೂ ತಮ್ಮ ಪ್ರತಿನಿಧಿಗಳ ಬಗ್ಗೆ ನಂಬಿಕೆ ಮೂಡುತ್ತದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಸದನದಲ್ಲಿ ಮೊಬೈಲ್ ನಿಷೇಧ: ವಿಧಾನಪರಿಷತ್ತಿನ ಸಭಾಂಗಣದಲ್ಲಿ ಮೊಬೈಲ್ ತರುವುದನ್ನು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಸದಸ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ವಿಧಾನಸಭೆಯಲ್ಲಿ ಮಾ.4 ಹಾಗೂ 5ರಂದು ‘ಒಂದು ದೇಶ-ಒಂದು ಚುನಾವಣೆ’ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಗಮನಿಸಿದ್ದೇನೆ. ವಿಧಾನಪರಿಷತ್ತಿನಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆಸುವ ಸಂಬಂಧ ಈವರೆಗೆ ರಾಜ್ಯ ಸರಕಾರದಿಂದ ಅಧಿಕೃತವಾದ ಯಾವ ಸಂದೇಶವು ಬಂದಿಲ್ಲ. ಮಾ.4 ರಿಂದ ವಿಧಾನಪರಿಷತ್ತಿನ ಕಲಾಪವು ಆರಂಭಗೊಳ್ಳಲಿದ್ದು, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಯಾಗುತ್ತವೆ ಎಂದು ಅವರು ತಿಳಿಸಿದರು.

ಎಲ್ಲ ಸಮುದಾಯಗಳಲ್ಲೂ ಬಡವರು ಇದ್ದಾರೆ. ಆದುದರಿಂದ, ಆರ್ಥಿಕವಾಗಿ ಹಿಂದುಳಿದಿರುವಂತಹವರಿಗೆ ಮೀಸಲಾತಿ ಸೌಲಭ್ಯ ಸಿಕ್ಕಿದರೆ ಉತ್ತಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವಿವಿಧ ಸಮುದಾಯಗಳು, ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟಗಳ ಬಗ್ಗೆ ನಾನು ಸಭಾಪತಿ ಸ್ಥಾನದಲ್ಲಿ ಕೂತು ಪ್ರತಿಕ್ರಿಯಿಸಲು ಸಾಧ್ಯವಿಲ್ಲ.

-ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News