ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣ: ರಾಜ್ಯ ಸರಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ

Update: 2021-02-23 15:23 GMT

ಬೆಂಗಳೂರು, ಫೆ.23: ಶಿವಮೊಗ್ಗ ಸ್ಫೋಟ ಪ್ರಕರಣದ ನಂತರವಾದರೂ ರಾಜ್ಯ ಸರಕಾರ ಅಕ್ರಮ ಕ್ವಾರಿ, ಜಿಲಿಟಿನ್ ಕಡ್ಡಿಗಳ ಸಂಗ್ರಹಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಚಿಕ್ಕಬಳ್ಳಾಪರದಲ್ಲಿ ಸ್ಫೋಟ ಸಂಭವಿಸುತ್ತಿರಲಿಲ್ಲ. ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾಮಾನ್ಯ ಕಾರ್ಮಿಕರು ಸಾವನ್ನಪ್ಪುವಂತಾಗಿದೆ ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸಿದ್ದ ಶಿವಮೊಗ್ಗ ಸ್ಫೋಟ ಪ್ರಕರಣ ಸಂಭವಿಸಿ ಕೆಲವೇ ದಿನಗಳಾಗಿವೆ. ಅಷ್ಟರಲ್ಲೇ ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ಪ್ರಕರಣ ನಡೆದಿದೆಯೆಂದರೆ, ರಾಜ್ಯ ಸರಕಾರಕ್ಕೆ ಜನಸಾಮಾನ್ಯರ ಸಾವಿನ ಬಗೆಗಾಗಲಿ, ಸ್ಫೋಟದಿಂದಾಗಿ ಜನತೆಯಲ್ಲಿ ಮೂಡಿರುವ ಆತಂಕದ ಬಗೆಗಾಗಲಿ ಕಾಳಜಿಯಿಲ್ಲ. ಹಾಗೂ ಅಕ್ರಮ ಸ್ಫೋಟಕ ಸಾಮಗ್ರಿಗಳ ದಾಸ್ತಾನು, ಸಾಗಣೆಯನ್ನು ನಿಯಂತ್ರಿಸುವುದರ ಕುರಿತು ಆಸಕ್ತಿಯಿಲ್ಲವೆಂದು ಪ್ರತಿಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

ಶಿವಮೊಗ್ಗದ ಹುಣಸೋಡುವಿನಲ್ಲಿ ಸಂಭವಿಸಿದ ಸ್ಫೋಟದ ಪ್ರಕರಣದ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಸ್ಫೋಟ ನಡೆದಿರುವುದು ರಾಜ್ಯ ಸರಕಾರದ ನಿಷ್ಕ್ರಿಯತೆ, ಬೇಜವಾಬ್ದಾರಿತನ ಮತ್ತು ಅಕ್ರಮದಲ್ಲಿ ಶಾಮೀಲಾಗಿರುವ ಭ್ರಷ್ಟತನಕ್ಕೆ ಸಾಕ್ಷಿ. ಮುಖ್ಯಮಂತ್ರಿಗಳು ಜನಸಾಮಾನ್ಯರನ್ನು ರಕ್ಷಿಸುತ್ತಿದ್ದಾರೆಯೇ ಇಲ್ಲವೇ ಭ್ರಷ್ಟರನ್ನೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಸಾವಿಗೀಡಾಗಿರುವುದು ಜಿಲಿಟಿನ್ ಸ್ಫೋಟದಿಂದ ಮಾತ್ರವಲ್ಲ, ಅಕ್ರಮ ಗಣಿಗಳನ್ನು ಸಕ್ರಮ ಮಾಡಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದ ದುರಾಡಳಿತದಿಂದ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದಿರುವ ಸ್ಫೋಟ ಪ್ರಕರಣವು ರಾಜ್ಯ ಸರಕಾರದ ಬೇಜವಾಬ್ದಾರಿತನ, ಅಧಿಕಾರಿಗಳ ಪರೋಕ್ಷ ಪ್ರೋತ್ಸಾಹದಿಂದ ನಡೆದಿದೆ. ಬಿಜೆಪಿ ಸರಕಾರಕ್ಕೆ ಜನರ ಜೀವದ ಬಗ್ಗೆ ಕಾಳಜಿಯಿಲ್ಲವೆಂಬುದು ಇದರಿಂದ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲೇ ಎರಡನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾನು ಹೇಳಿದ್ದೆ. ಆದರೆ, ತನ್ನ ಆಂತರಿಕ ಸಮಸ್ಯೆಗಳಲ್ಲೇ ಮುಳುಗಿರುವ ಬಿಜೆಪಿ ಸರಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲವೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಚಿಕ್ಕಬಳ್ಳಾಪುರ ಜಿಲಿಟಿನ್ ಸ್ಫೋಟ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕು. ಹಾಗೂ ಕೂಡಲೇ ಪ್ರಕರಣಕ್ಕೆ ಕಾರಣರಾದ ಜಿಲ್ಲೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.

-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಜನಪ್ರತಿನಿಧಿಗಳೇ ಪಾಲ್ಗೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಆಗ ಮಾತ್ರವೇ ರಾಜ್ಯದಲ್ಲಿ ನಡೆಯುತ್ತಿರುವ ಸ್ಫೋಟ ಪ್ರಕರಣಗಳನ್ನು ತಡೆಯಲು ಸಾಧ್ಯ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಅಕ್ರಮ ಗಣಿಗಾರಿಕೆ ನಿಯಂತ್ರಣ ಮಾಡುತ್ತೇವೆ ಎನ್ನುವ ರಾಜ್ಯ ಸರಕಾರ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎಂಬುದಕ್ಕೆ ಈ ದುರಂತ ಸಾಕ್ಷಿ. ಬಿಜೆಪಿ ಸರಕಾರ ಹೇಳುವುದೊಂದು, ಮಾಡುವುದೊಂದಾಗಿದೆ. ಇದರ ಪರಿಣಾಮವೇ ಚಿಕ್ಕಬಳ್ಳಾಪುರದಲ್ಲಿ ಆರು ಮುಗ್ಧ ಜೀವಗಳ ಬಲಿಯಾಗಿದೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News