ಅಂಜುವುದಿಲ್ಲ, ಬಗ್ಗುವುದಿಲ್ಲ, ಪಲಾಯನ ಇಲ್ಲವೇ ಇಲ್ಲ: ಶಾಸಕ ಯತ್ನಾಳ್

Update: 2021-02-23 16:19 GMT

ಬೆಂಗಳೂರು, ಫೆ.23: ರವಿವಾರ ರಾತ್ರಿ ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾಗಿರುವ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿಬಿಎಸ್ಇ ನೋಂದಣಿಗಾಗಿ ತುರ್ತು ಕಾರ್ಯನಿಮಿತ್ತ ಹೊಸದಿಲ್ಲಿಗೆ ಬಂದಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿರುವ ತಮ್ಮ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯವನ್ನಾಗಲೀ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ. ನಾನು ಯಾವುದೇ ನಾಯಕರ ಭೇಟಿಗೂ ಸಮಯ ಕೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿ, ‘ಬಲ್ಲ ಮೂಲಗಳಿಂದ’ ಎಂದು ಹೇಳಿಸಿ ಮತ್ತು ಬರೆಸಿ ರಾಜ್ಯದ ಜನರಲ್ಲಿ, ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿದ್ದಾರೆ. ‘ಯತ್ನಾಳನಿಗೆ ಮುಖಭಂಗ’, ‘ಬಿಗ್ ಶಾಕ್’, ‘ಎಚ್ಚರಿಕೆ’ ಮತ್ತು ‘ಬಾಯಿಗೆ ಬೀಗ’ ಅಂತ ವ್ಯವಸ್ಥಿತ ಅಪಪ್ರಚಾರ ಮಾಡಿಸುತ್ತಿದ್ದಾರೆ. ನಾನು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾರ ಸಮಯವನ್ನೂ ಕೇಳಲಿಲ್ಲ ಎಂದು ಅವರು ತಿಳಿಸಿದ್ದಾರೆ.

ನನ್ನ ಹೋರಾಟ ನನ್ನ ಆದರ್ಶ ಗುರು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಹಾಗೂ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಸಂಕಲ್ಪದ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಮುಕ್ತ ಭಾರತದ ಭಾಗವಾಗಿದೆಯೇ ಹೊರತು ವೈಯಕ್ತಿಕ ವ್ಯಕ್ತಿ ವಿರುದ್ಧ ಅಲ್ಲ. ನನ್ನ ಮಾತು ಪಕ್ಷದ ವಿರುದ್ಧ ಅಲ್ಲವೇ ಅಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ಸೂಕ್ತ ಉತ್ತರವನ್ನು ಬಂದ ಮೇಲೆ ಕೊಡುತ್ತೇನೆ. ಹಿಂದೂ ಸಮಾಜದಲ್ಲಿಯ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ, ಅಂಜುವುದಿಲ್ಲ, ಬಗ್ಗುವುದೂ ಇಲ್ಲ ಮತ್ತು ಪಲಾಯನ ಇಲ್ಲವೇ ಇಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News