ಪಿಎಫ್‍ಐ, ಎಸ್‍ಡಿಪಿಐ ಕಾಂಗ್ರೆಸ್ ನ ಅಂಗಸಂಸ್ಥೆಗಳು: ಬಿ.ವೈ.ವಿಜಯೇಂದ್ರ

Update: 2021-04-25 16:48 GMT

ಬೆಂಗಳೂರು, ಫೆ.23: ದೇಶದ್ರೋಹಿ, ಮತಾಂಧ ಉಗ್ರಗಾಮಿಗಳ ಹುಟ್ಟಡಗಿಸಿ, ಆರ್ಟಿಕಲ್ 370 ಜಾರಿಗೆ ತಂದು, ಕಾಶ್ಮೀರ ರಕ್ಷಿಸಿ, ಭಾರತದ ಸಾರ್ವಭೌಮತೆಯನ್ನು ಬಲಿಷ್ಠತೆಯನ್ನು ಸಾರಿದ ಬಿಜೆಪಿ ಬದ್ಧತೆ, ಸಾಮರ್ಥ್ಯ ಏನೆಂಬುದು ಜನತೆಗೆ ತಿಳಿದಿದೆ. ನಿಮ್ಮ ಕಾಂಗ್ರೆಸ್‍ನ ಅಂಗಸಂಸ್ಥೆಗಳೇ ಆಗಿರುವ ಪಿಎಫ್‍ಐ, ಎಸ್‍ಡಿಪಿಐಗಳಿಗೆ ಮುಕ್ತಿ ಹಾಡುವ ಕಾಲ ಶೀಘ್ರದಲ್ಲೇ ಬರಲಿದೆ, ನೋಡುತ್ತಿರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯನವರೇ, ‘ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳ ಪೋಷಣೆ ಕಾಂಗ್ರೆಸ್‍ನ ಹೊಣೆ’ ಎಂಬಂತೆ ಅವುಗಳ ಮೇಲಿದ್ದ ಕ್ರಿಮಿನಲ್ ಕೇಸ್‍ಗಳನ್ನು ನಿಮ್ಮ ಅಧಿಕಾರವಧಿಯಲ್ಲಿ ವಾಪಸ್ಸು ಪಡೆದುಕೊಂಡಿರಿ. ಈ ಪಾಪ ಕಾರ್ಯಕ್ಕೆ ರಾಜ್ಯದ ಜನತೆ ನಿಮಗೆ ತಕ್ಕ ಪಾಠ ಕಲಿಸಿದ್ದನ್ನು ನೀವು ಮರೆತಂತೆ ಕಾಣುತ್ತದೆ. ಎಲ್ಲವನ್ನೂ ರಾಜಕೀಯದ ಹಳದಿ ಕಣ್ಣಿನಿಂದ ನೋಡಬೇಡಿ ಎಂದು ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯನವರೇ, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಸುಭಾಷ್ ಚಂದ್ರ ಬೋಸ್, ವೀರ್ ಸಾವರ್ಕರ್, ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್‍ರಂತಹ ಮಹಾನ್ ದೇಶಭಕ್ತರನ್ನು ಸ್ಮರಿಸುವ ಸೌಜನ್ಯವಾಗಲಿ, ಐತಿಹಾಸಿಕ ಪ್ರಜ್ಞೆಯಾಗಲಿ ಇಲ್ಲದ ಕಾಂಗ್ರೆಸ್ ಹಾಗೂ ನಿಮಗೆ ಆರೆಸ್ಸೆಸ್ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಆರೆಸ್ಸೆಸ್ ದೇಶಭಕ್ತರ ಮಹಾ ಪಡೆ ಕಟ್ಟಿದ ಒಂದು ನಿಷ್ಠಾವಂತ, ಸಮರ್ಪಿತ, ಬೃಹತ್ ಸಂಘಟನೆ. ಅಖಂಡ ಭಾರತದ ನವನಿರ್ಮಾಣಕ್ಕಾಗಿ ಸಂಕಲ್ಪ ತೊಟ್ಟಿರುವ ತಪಸ್ವಿಗಳ ವೇದಿಕೆ, ದೇಶಸೇವೆಗೆ ಬದ್ಧವಾಗಿರುವ ಸ್ವಯಂಸೇವಕರ ಅದ್ವಿತೀಯ ಸಂಘಟನೆ. ಅದರ ಎತ್ತರಕ್ಕೆ ಏರಲಾಗದಿದ್ದರೂ ಅಡ್ಡಿಯಿಲ್ಲ, ನಿಮ್ಮ ಸ್ತರಕ್ಕೆ ಅದನ್ನು ಕುಗ್ಗಿಸುವ ಪ್ರಯತ್ನ ಬೇಡ ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News