ಮೀಸಲಾತಿಗೆ ಹೋರಾಡುತ್ತಿರುವ ಸ್ವಾಮೀಜಿಗಳನ್ನು ಕೆಡವಿ ಹೊಡೆಯಬೇಕು: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು

Update: 2021-02-23 17:09 GMT

ಮೈಸೂರು, ಫೆ.23: ನೊಂದವರು, ಶೋಷಿತರು, ಆರ್ಥಿಕವಾಗಿ ಹಿಂದುಳಿದವರು ಮೀಸಲಾತಿಗಾಗಿ ಹೋರಾಟ ಮಾಡಬೇಕು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿರುವ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು ದುರದೃಷ್ಟಕರ. ಅವರ ಹೋರಾಟದ ನೇತೃತ್ವ ವಹಿಸಿರುವ ಸ್ವಾಮೀಜಿಗಳನ್ನು ಕೆಡವಿಕೊಂಡು ಹೊಡೆಯಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ನೇತೃತ್ವ ವಹಿಸಿಕೊಂಡಿರುವ ಖಾವಿ ದಾರಿಗಳಿಗೆ ಕೆಡವಿಕೊಂಡು ಹೊಡೆಯಬೇಕು. ಯಾಕೆಂದರೆ ಬಸವ ಧರ್ಮದ ಅನುಯಾಯಿಗಳಾದ ಇವರು ರಾಜಕಾರಣ ಮಾಡುತ್ತಿದ್ದಾರೆ. ಧರ್ಮ ಮತ್ತು ರಾಜಕಾರಣ ಒಟ್ಟಿಗೆ ಸೇರಬಾರದು. ಆದರೆ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಸ್ವಾಮೀಜಿಗಳು  ಶೋಷಿತರು, ನೊಂದವರ ಪರವಾಗಿರದೆ ಉಳ್ಳವರ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಗವದ್ಗೀತೆಯನ್ನು ಕಾಲೇಜು ಪಠ್ಯದಲ್ಲಿ ಸೇರಿಸುತ್ತೇನೆ ಎಂದು ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಓರ್ವ ನಾಲಾಯಕ್ ಸಚಿವ. ಆತನನ್ನು ಸಚಿವ ಸಂಪುಟದಿಂದ ಕಿತ್ತೊಗೆಯುವ ಬದಲು ಅವನ ಉನ್ನತ ಶಿಕ್ಷಣ ಖಾತೆಯಿಂದ ಬದಲಾಯಿಸಬೇಕು. ಹಾಗೆ ಬೌದ್ಧ ಮತ್ತು ಜೈನ ಧರ್ಮ ದ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕಲು ಮುಂದಾಗಿರುವ ಸಚಿವ ಸುರೇಶ್ ಅಸಮರ್ಥ ಹಾಗೂ ಅಯೋಗ್ಯ ಮಂತ್ರಿ ಎಂದು ಕಿಡಿಕಾರಿದರು.

ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಮೂರನೇ ದರ್ಜೆ ಸಿನಿಮಾ ನಟಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವೆ. ಬಟ್ಟೆ ಅಂಗಡಿಯಲ್ಲಿ ಸೀರೆ ಮಾರಾಟ ಮಾಡುತ್ತಿದ್ದ ನಿರ್ಮಲ ಸೀತಾರಾಮನ್ ದೇಶದ ಹಣಕಾಸು ಸಚಿವೆ. ಇವರಿಗೆ ಆರ್ಥಿಕ ಪರಿಸ್ಥಿತಿಯ ಬಗ್ಗೆ ಏನು ಗೊತ್ತು ಎಂದು ಪ್ರಶ್ನಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News