ಕೃಷಿ, ಎಪಿಎಂಸಿ, ಗೋಹತ್ಯೆ ಕಾಯ್ದೆ ಖಂಡಿಸಿ ಮಾ.22ಕ್ಕೆ ವಿಧಾನಸೌಧ ಚಲೋ: ಬಡಗಲಪುರ ನಾಗೇಂದ್ರ

Update: 2021-02-23 17:51 GMT

ಮೈಸೂರು,ಫೆ.23: ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಾಗೂ ರಾಜ್ಯ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ-ಕರ್ನಾಟಕದ ವತಿಯಿಂದ ಮಾ.22 ರಂದು ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ, ಆರ್.ಎಂ.ಪಿಯನ್ನು ಸಶಕ್ತಗೊಳಿಸಲು ಒತ್ತಾಯಿಸಿ ಕಾಫಿ, ಮೆಣಸು, ತಂಬಾಕು, ರೇಷ್ಮೆ ಮತ್ತು ಎಣ್ಣೆ ಕಾಳುಗಳು ಹಾಗೂ ಇತರೇ ಕೃಷಿ ಕೇಂದ್ರ ಸರ್ಕಾರ 2 ಲಕ್ಷ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಮತ್ತು ಇತರೇ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ, ದಲಿತ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ ಯುವಜನ ಹಾಗೂ ಪ್ರಗತಿಪರ ಸಂಘಟನೆಗಳು ಸೇರಿ ರಚನೆ ಮಾಡಿಕೊಂಡಿರುವ ಸಂಯುಕ್ತ ಹೋರಾಟ-ಕರ್ನಾಟಕ ಅಡಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಸುಮಾರು 50 ಸಾವಿರ ಜಮರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ಪೂರಕವಾಗಿ ಸುಮಾರು 150 ತಾಲೂಕುಗಳಲ್ಲಿ ಸಮಾವೇಶಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ರೈತ ವಿರೋಧಿ ಮಸೂದೆಗಳ ವಿರುದ್ಧ ಹೋರಾಟ ಮಾಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರನ್ನು ಆಹ್ವಾನಿಸಲಾಗುವುದು ಎಂದರು.

ನರೇಂದ್ರ ಮೋದಿಯವರು ಪದೇ ಪದೇ ಎಂ.ಎಸ್.ಪಿ. ಬೆಲೆಯಲ್ಲಿ 23 ಕೃಷಿ ಉತ್ಪನ್ನಗಳನ್ನು ಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಘೋಷಿಸಿರುವ ಬೆಲೆಗಿಂತಲೂ ಕಡಿಮೆ ದರಕ್ಕೆ ರಾಜ್ಯದಲ್ಲಿ ಮುಸುಕಿನ ಜೋಳ, ಕಡಲೆಕಾಯಿ, ತೊಗರಿ, ಸೂರ್ಯಪಾನ ಹಾಗೂ ಇತರೆ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಎಂ.ಎಸ್.ಪಿ. ಎಲ್ಲಿದೆ ತೋರಿಸಿ ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ  ಹಮ್ಮಿಕೊಂಡಿದ್ದು, ಈ ಕಾಯಕ್ರಮಕ್ಕೆ ಕರ್ನಾಟಕದಿಂದ ಚಾಲನೆ ನೀಡುತ್ತಿದ್ದು, ಮಾರ್ಚ್ ಮೊದಲನೇ ವಾರ ಸಂಯುಕ್ತ ಹೋರಾಟ-ಕರ್ನಾಟಕದಿಂದ ರಾಜ್ಯದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ಮುಖಂಡರಾದ ಪ್ರೊ.ಯೋಗೇಂದ್ರ ಯಾದವ್ ಮತ್ತು ಇತರರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ವಾರ ಬಿದ್ದಿದ್ದ ಆಲಿಕಲ್ಲು ಮಳೆಯಿಂದ ಕಾಫಿ, ಮೆಣಸು, ಬಾಳೆ ಇತರೆ ತೋಟಗಾರಿಕೆ ಬೆಳೆಗಳು ನಾಸವಾಗಿದ್ದು, ಈ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೊಡಗು ಸೇರಿದಂತೆ ಎಚ್.ಡಿ.ಕೋಟೆ, ನಂಜನಗೂಡು, ಗುಂಡ್ಲುಪೇಟೆ ತಾಲೂಕುಗಳಲ್ಲಿ ಮತ್ತು ತರೆ ಕಡೆ ಇತ್ತೀಚೆಗೆ ಹುಲಿ ಹಾವಳಿ ಜಾಸ್ತಿಯಾಗಿದ್ದು, ಕೇವಲ 12 ಗಂಟೆ ಸಮಯದಲ್ಲಿ ಕೊಡಗಿನಲ್ಲಿ ಇಬ್ಬರನ್ನು ಹುಲಿ ಕೊಂದು ತಿಂದು ಹಾಕಿದೆ. ಹುಲಿ ಪ್ರತ್ಯಕ್ಷವಾಗಿ ಶಾಲಾ ವಿದ್ಯಾರ್ಥಿ ಒಬ್ಬಳು ಆಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿದ್ದಾಳೆ ಮತ್ತು ಕಾಡಾನೆಗಳಿಂದ ಪಸಲು ನಷ್ಟಕ್ಕೀಡಾಗಿ ರೈತರು ತೊಂದರೆಗೊಳಗೀಡಾಗಿದ್ದಾರೆ. ಮನುಷ್ಯರನ್ನು ತಿಂದು ಹಾಕುವ ಹುಲಿಯನ್ನು ಹಿಡಿಯಬೇಕು ಇಲ್ಲವೆ ಕಂಡಲ್ಲಿ ಗುಂಡು ಹಾಕಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ಪ್ರಾಣ ಹಾನಿಯಾಗುವ ಆತಂಕವಿದೆ ಎಂದು ಹೇಳಿದರು.

ಹುಲಿ ಮತ್ತು ಆನೆಗಳಿಂದ ಹತ್ಯೆಯಾಗಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ 50 ಲಕ್ಷ ರೂ. ಪರಿಹರ ನೀಡಬೇಕು. ಉದ್ಯೋಗ ನೀಡಬೇಕು ಹಾಗೂ ಆ ಕುಟುಂಬದ ಮಕ್ಕಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಬೇಕು. ಪಸಲು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಅಲ್ಲದೆ ಕಾಡಾನೆಗಳ ಹಾವಳಿಗಳನ್ನು ತಡೆಯಲು ಕಂದಕ ನಿರ್ಮಾಣ, ಸೋಲಾರ್ ಬೇಲಿ ಮತ್ತು ರೈಲ್ವೆ ಕಂಬಿ ಅಳಡವಡಿಸಬೇಕು. ಈ ಸಂಬಂಧ ಬಜೆಟ್‍ನಲ್ಲಿ ಹಣ ಒದಗಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಶೆಟ್ಟಳ್ಳಿ ಚಂದ್ರೇಗೌಡ, ನೇತ್ರಾವತಿ, ಪಿ.ಮರಂಕಯ್ಯ ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆಗೆ ಹಣ ನೀಡದ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರ ಹೆಚ್ಚುವರಿ ಕಾವೇರಿ ನೀರನ್ನು ನದಿ ಜೋಡಣೆಗೆ ಮುಂದಾಗಿರುವುದಕ್ಕೆ ಹಣ ನೀಡಿರುವುದು ಖಂಡನೀಯ. ಈ ಯೋಜನೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗಲಿದೆ. ಈ ಸಂಬಂಧ ನೀರಾವರಿ ತಜ್ಞರ ಜೊತೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು.
-ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ. ಕರ್ನಾಟಕ ರಾಜ್ಯ ರೈತ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News