ನೇಣು ಬಿಗಿದು ಪೌರಕಾರ್ಮಿಕ ಆತ್ಮಹತ್ಯೆ: ಮೇಲಾಧಿಕಾರಿಗಳ ಕಿರುಕುಳ ಆರೋಪ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2021-02-23 17:57 GMT
ಪೌರಕಾರ್ಮಿಕ ನಾರಾಯಣ

ಮಂಡ್ಯ, ಫೆ.23: ತನ್ನದಲ್ಲದ ತಪ್ಪನ್ನು ಒಪ್ಪಿಕೊಳ್ಳುವಂತೆ ಮೇಲಾಧಿಕಾರಿಗಳ ಒತ್ತಾಯದಿಂದ ಮನನೊಂದು ಪೌರಕಾರ್ಮಿಕ ನಾರಾಯಣ ಮದ್ದೂರು ಪಟ್ಟಣದ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತನ್ನ ಸಾವಿಗೆ ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಹಾಗೂ ಇತರರು ಕಾರಣರೆಂದು ಆತ್ಮಹತ್ಯೆಗೆ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದು, ಅಧಿಕಾರಿಗಳ ವಿರುದ್ಧ ಪೌರಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲದಿನಗಳ ಹಿಂದೆ ಪೌರಕಾರ್ಮಿಕ ನಾರಾಯಣ ಅವರನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್, ಪುರಸಭೆ ಅಧ್ಯಕ್ಷ ಸುರೇಶ್‍ ಕುಮಾರ್ ಬಲವಂತವಾಗಿ ಮ್ಯಾನ್‍ಹೋಲ್‍ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಛಗೊಳಿಸಿದ್ದರೆಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮಲ ಸ್ವಚ್ಛಗೊಳಿಸಿದ್ದ ವಿಷಯ ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದು ಪುರಸಭೆಯ ಹೊರಗುತ್ತಿಗೆ ನೌಕರರಾಗಿದ್ದ ವಾಹನ ಚಾಲಕರ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಅವರನ್ನು ಕೆಲಸದಿಂದ ಏಕಾಏಕಿ ಕೈಬಿಡಲಾಗಿತ್ತು. ಈ ಸಂಬಂಧ ಹೊರಗುತ್ತಿಗೆ ವಾಹನ ಚಾಲಕರ ಸಂಘಟನೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ತಂದಿತ್ತು.

ಇದರಿಂದ ಕೆರಳಿದ ಅಧಿಕಾರಿಗಳು ಖಾಯಂ ಪೌರಕಾರ್ಮಿಕ ನಾರಾಯಣ್ ಅವರನ್ನು ಬೆದರಿಸಿ ತಾನೇ ಸ್ವಯಂಆಗಿ ಮ್ಯಾನ್‍ಹೋಲ್‍ಗೆ ಇಳಿದು ಮಲ ಸ್ವಚ್ಛಗೊಳಿಸಿದ್ದೇನೆಂದು ಹೇಳಿಕೆ ನೀಡುವಂತೆ ಬೆದರಿಸಿದ್ದು, ಇದರಿಂದ ಮನನೊಂದು ನಾರಾಯಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಾರಾಯಣ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣವೆಂದು ಆರೋಪಿಸಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಪೌರಕಾರ್ಮಿಕ ನಾರಾಯಣ ಆತ್ಮಹತ್ಯೆಗೆ ಮದ್ದೂರು ಪುರಸಭೆ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್, ಪರಿಸರ ಅಭಿಯಂತರ ನಾಗೇಂದ್ರ ಅವರೇ ಕಾರಣರಾಗಿದ್ದು, ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಬೇಕು. ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕಲ್ಪಿಸಬೇಕ ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ರಾಜ್ಯ ಸಮಿತಿ ನಿರ್ದೇಶಕ ಎನ್.ಕೆ.ಅರ್ಮುಗಂ ಕಿಶೋರ್ ಆಗ್ರಹಿಸಿದ್ದು, ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News