ಹವಾಮಾನ ಬದಲಾವಣೆ ಅಪಾಯಗಳ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ

Update: 2021-02-23 18:31 GMT

ಖರಗಪುರ (ಪ.ಬಂಗಾಳ),ಫೆ.23: ಹವಾಮಾನ ಬದಲಾವಣೆಯ ಅಪಾಯಗಳು ಮತ್ತು ಇತ್ತೀಚಿನ ಉತ್ತರಾಖಂಡ ದುರಂತದಂತಹ ನೆೈಸರ್ಗಿಕ ವಿಕೋಪಗಳ ವಿರುದ್ಧ ಮಂಗಳವಾರ ಇಲ್ಲಿ ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು,ಇಂತಹ ಅಪಾಯಗಳ ಪರಿಣಾಮಗಳನ್ನು ತಡೆಯಬಲ್ಲ ವಿಪತ್ತು ಪ್ರತಿರೋಧಕ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವಂತೆ ಐಐಟಿಗಳಿಗೆ ಕರೆ ನೀಡಿದರು.

ದೇಶದ ಅತ್ಯಂತ ಹಳೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಾಗಿರುವ ಐಐಟಿ (ಖರಗಪುರ)ಯ 66ನೇ ಘಟಿಕೋತ್ಸವದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಮೋದಿ,ಜನರ ಬದುಕುಗಳಲ್ಲಿ ಬದಲಾವಣೆಗಳನ್ನು ತರಲು ಸ್ಟಾರ್ಟ್‌ಪ್‌ಗಳಿಗಾಗಿ ವಿದ್ಯಾರ್ಥಿಗಳಿಗೆ ಸೆಲ್ಫ್ ಅವೇರ್‌ನೆಸ್(ಸ್ವಯಂ ಜಾಗ್ರತಿ),ಸೆಲ್ಫ್ ಕಾನ್ಫಿಡೆನ್ಸ್ (ಆತ್ಮ ವಿಶ್ವಾಸ) ಮತ್ತು ಸೆಲ್ಫಿಷ್‌ಲೆಸ್‌ನೆಸ್ (ನಿಸ್ವಾರ್ಥ)ಗಳ ‘ಸೆಲ್ಫ್-3’ ಮಂತ್ರವನ್ನು ಬೋಧಿಸಿದರು.

ಇಂಟರ್‌ನ್ಯಾಷನಲ್ ಸೋಲಾರ್ ಅಲಯನ್ಸ್‌ನಂತಹ ಉಪಕ್ರಮಗಳ ಮೂಲಕ ಜನರಿಗೆ ಸುರಕ್ಷಿತ,ಅಗ್ಗದ ಮತ್ತು ಪರಿಸರ ಸ್ನೇಹಿ ಶಕ್ತಿಯನ್ನು ಲಭ್ಯವಾಗಿಸುವ ಅಗತ್ಯದ ಕುರಿತೂ ಅವರು ಮಾತನಾಡಿದರು.

ನೈಸರ್ಗಿಕ ವಿಕೋಪಗಳು ಮೂಲಸೌಕರ್ಯಗಳನ್ನು ನಾಶಗೊಳಿಸುವುದರಿಂದ ಹವಾಮಾನ ಬದಲಾವಣೆಯು ಪ್ರಮುಖ ಸವಾಲಾಗಿದೆ. ವಿಪತ್ತು ನಿರ್ವಹಣೆ ಸಮಸ್ಯೆಯ ಬಗ್ಗೆ ಭಾರತವು ವಿಶ್ವದ ಗಮನವನ್ನು ಸೆಳೆದಿದೆ ಎಂದ ಅವರು,ಉತ್ತರಾಖಂಡದಲ್ಲಿ ಇತ್ತೀಚಿಗೆ ಸಂಭವಿಸಿರುವ ದುರಂತವನ್ನು ನೋಡಿ. ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳಬಲ್ಲ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುತ್ತ ಗಮನ ಹರಿಸಬೇಕಿದೆ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.

2019ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗದಲ್ಲಿ ತಾನು ಪ್ರಕಟಿಸಿದ್ದ ವಿಪತ್ತು ಪ್ರತಿರೋಧಕ ಮೂಲಸೌಕರ್ಯ ಮೈತ್ರಿಕೂಟದ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ,ಕೋವಿಡ್-19ರ ವಿರುದ್ಧ ಹೋರಾಡಲು ತಂತ್ರಜ್ಞಾನಗಳನ್ನು ರೂಪಿಸುವಲ್ಲಿ ಐಐಟಿಗಳ ಪಾತ್ರವನ್ನು ಪ್ರಶಂಸಿಸಿದರು. ಈ ಸಂಸ್ಥೆಗಳು ಈಗ ಇತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News