ಸಿಎಂ, ಸಚಿವರು ಒಂದು ವರ್ಗದ ಹಿತೈಷಿಗಳಂತೆ ವರ್ತಿಸಬಾರದು: ಸಿದ್ದರಾಮಯ್ಯ

Update: 2021-02-24 14:47 GMT

ಬೆಂಗಳೂರು, ಫೆ. 24: ‘ಕೊರೋನ ಹಾವಳಿಯಿಂದಾಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು,ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡು-ಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಂದು ವರ್ಗದ ಹಿತೈಷಿಯಂತೆ ವರ್ತಿಸಬಾರದು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು  ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಈಗಿನ ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳನ್ನು ಈಗಿನ ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು' ಎಂದು ಸೂಚಿಸಿದ್ದಾರೆ. 

‘ಶುಲ್ಕ ಕಡಿತದ ರಾಜ್ಯ ಸರಕಾರಿ ಆದೇಶವನ್ನು ಧಿಕ್ಕರಿಸಿರುವ ಖಾಸಗಿ ಶಾಲೆಗಳ ನಿಲುವಿನ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಅವರ ಅಸಾಮರ್ಥ್ಯವನ್ನಷ್ಟೇ ತೋರಿಸುತ್ತದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಕೊರೋನ ಕಾಲದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯ ಸರಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ' ಎಂದು ಸಿದ್ದರಾಮಯ್ಯ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News