ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-02-24 14:52 GMT

ಬೆಂಗಳೂರು, ಫೆ. 24: ಅರಣ್ಯ ಪ್ರದೇಶಗಳಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಲು ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಅರಣ್ಯದಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬುಧವಾರ ಇಲ್ಲಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಎಲ್ಲ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ/ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳು ಮತ್ತು ರೈತರ ಸಹಕಾರ ಬಹಳ ಮುಖ್ಯ. ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣಾಧಿಕಾರಿಗಳ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ಕಾಡ್ಗಿಚ್ಚು ತಡೆಗೆ ಕ್ರಮ ವಹಿಸಿ: ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ಶೇ.22.8ರಷ್ಟಿದೆ. ಅದನ್ನು ಶೇ.33 ರಷ್ಟಕ್ಕೆ ಹೆಚ್ಚಿಸಬೇಕು. ಇದಕ್ಕೆ ಸರಕಾರದ ಅಗತ್ಯವಾದ ಎಲ್ಲ ರೀತಿಯ ನೆರವು ಹಾಗೂ ಸಹಕಾರ ನೀಡಲು ಸರಕಾರ ಸಿದ್ಧ ಎಂದ ಅವರು, ಬೇಸಿಗೆ ಸಮೀಪಿಸುತ್ತಿದೆ. ಕಾಡ್ಗಿಚ್ಚು ಹಬ್ಬಬಹುದು, ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರಕಾರ ಸಿದ್ಧವಿದೆ. ರಾಜ್ಯದಲ್ಲಿ ಅರಣ್ಯ ಪ್ರದೇಶದ ಅಭಿವೃದ್ಧಿ, ವನ್ಯಜೀವಿಗಳು ಹಾಗೂ ಪ್ರಾಣಿ, ಪಕ್ಷಿಗಳ ಸಂತತಿ ಹೆಚ್ಚಳಕ್ಕೆ ಇಲಾಖೆಯೊಂದಿಗೆ ಜನ ಸಾಮಾನ್ಯರು ಕೈಜೋಡಿಸಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.

ಗಣಿಗಾರಿಕೆಗೆ ಅನುಮತಿ ನೀಡಬೇಡಿ: ಕಾರ್ಯಾಗಾರದಲ್ಲಿ ಮಾತನಾಡಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.

ಗಣಿಗಾರಿಕೆಯಿಂದ ಪ್ರಾಣಿಗಳ ಆಹಾರ ಪದ್ಧತಿ ಬದಲಾಗಿದೆ ಹಾಗೂ ಆ ಶಬ್ದಗಳಿಂದ ಹೆದರಿ ಅವು ಸಮೀಪ ಇರುವ ನಗರ ಪಟ್ಟಣ ಪ್ರದೇಶಗಳಿಗೆ ನುಗ್ಗುತ್ತಿವೆ. ಇದರಿಂದ, ಅನೇಕ ಕಡೆಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷದ ಜೊತೆಗೆ ಹಲವು ರೀತಿಯ ಆಪತ್ತುಗಳು ಉಂಟಾಗುತ್ತಿವೆ ಎಂದು ಅವರು ಹೇಳಿದರು.

ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಾಡು ಪ್ರಾಣಿಗಳಿಂದ ಮನುಷ್ಯರು ಸಾವಿಗೀಡಾದಾಗ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚು ಮಾಡಬೇಕು. ದೊಡ್ಡ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳು ಸತ್ತಾಗ ನಾವು 5 ಸಾವಿರ ರೂ. ಮತ್ತು 10 ಸಾವಿರ ರೂ.ಪರಿಹಾರ ನೀಡುತ್ತಿದ್ದೇವೆ. ಇದನ್ನು ಹೆಚ್ಚಳ ಮಾಡಬೇಕಿದೆ ಎಂದು ಅವರು ಹೇಳಿದರು.

ಮುಖ್ಯವಾಗಿ ಕೆಳಹಂತದ ಅರಣ್ಯ ಇಲಾಖೆಯ ನೌಕರರು ಅರಣ್ಯ ಸಂರಕ್ಷಣೆಗೆ ವಾಹನ ಬಳಸಬೇಕಾದ್ದು ಅನಿವಾರ್ಯ. ಆದರೆ, ನಾವು ಅವರಿಗೆ ವಾಹನ ಒದಗಿಸಿಲ್ಲ, ಅವರದ್ದೇ ಸ್ವಂತ ದ್ವಿಚಕ್ರವಾಹನ ಬಳಸುತ್ತಿದ್ದಾರೆ. ನಾವು ಕನಿಷ್ಠ ಇಂಧನ ಭತ್ಯೆಯನ್ನದರೂ ಕೊಡಬೇಕಿದೆ ಎಂದು ಅವರು ತಿಳಿಸಿದರು.

ಕಾಡು ಪ್ರಾಣಿಗಳು ನಗರ ಪ್ರದೇಶಗಳಿಗೆ ನುಗ್ಗದಂತೆ ವಿಶೇಷವಾಗಿ ಕಾಡಾನೆಗಳು ಬರದಹಾಗೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅನುಮತಿ ಕೋರಿ ಸದ್ಯದಲ್ಲೇ ಸರಕಾರಕ್ಕೆ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News