ಕಾಂಗ್ರೆಸ್ ಸೇರ್ಪಡೆ ಕುರಿತು ಡಿಕೆಶಿ ಜೊತೆ ಶರತ್ ಬಚ್ಚೇಗೌಡ ಚರ್ಚೆ

Update: 2021-02-24 16:19 GMT

ಬೆಂಗಳೂರು, ಫೆ.24: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ನಮ್ಮ ಪಕ್ಷಕ್ಕೆ ಸಹ ಸದಸ್ಯರಾಗಿ ಕೆಲಸ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು, ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬುಧವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಶರತ್ ಬಚ್ಚೇಗೌಡ ಜೊತೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಅಭ್ಯರ್ಥಿಯು ಸಿದ್ಧಾಂತದ ಆಧಾರದ ಮೇಲೆ ಸಹ ಸದಸ್ಯನಾಗಿ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದು. ಅವರ ಕಾರ್ಯಕರ್ತರು ಪಕ್ಷ ಸೇರಬಹುದು ಎಂದರು.

ಮೈಸೂರು ಮೇಯರ್ ವಿಚಾರ: ಈಗಾಗಲೇ ಮೈಸೂರು ಮೇಯರ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಪ್ಪಂದ ಆಗಿದೆ. ಕಾಂಗ್ರೆಸ್‍ಗೆ 2 ವರ್ಷ ಹಾಗೂ ಜೆಡಿಎಸ್‍ಗೆ 3 ವರ್ಷ ಮೇಯರ್ ಸ್ಥಾನ ಎಂದು ನಿರ್ಧರಿಸಲಾಗಿತ್ತು. ಆ ಪ್ರಕಾರ ಜೆಡಿಎಸ್ ನಡೆದುಕೊಳ್ಳಲಿದೆ ಎಂದು ನಾವು ಭಾವಿಸಿದ್ದೇವೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಮೈತ್ರಿ ಮುರಿಯುವ ವಿಚಾರವಾಗಿ ಯಾರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ ಎಂಬುದನ್ನು ನಾನು ಪ್ರತ್ಯಕ್ಷವಾಗಿ ನೋಡಿ ತಿಳಿಯುವವರೆಗೂ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ. ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರೆ ಅದಕ್ಕಾಗಿ ಯಾರ ಜೊತೆ ಬೇಕಾದರೂ ಮಾತನಾಡುತ್ತೇನೆ. ಯಾರೂ ಕೂಡ ನನ್ನ ಮೇಲೆ ನಿರ್ಬಂಧ ಹೇರಿಲ್ಲ. ನಮಗೆ ಪಕ್ಷದ ತತ್ವ, ನಿಲುವು ಮುಖ್ಯ ಎಂದು ಶಿವಕುಮಾರ್ ಹೇಳಿದರು.

ಚಿಕ್ಕಬಳ್ಳಾಪುರ ಸ್ಫೋಟ: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟದ ಸ್ಥಳಕ್ಕೆ ನಮ್ಮ ವಿರೋಧ ಪಕ್ಷದ ನಾಯಕರು ನಿನ್ನೆ ಭೇಟಿ ನೀಡಿದ್ದು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರೂ ಕೂಡ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಪಾದಯಾತ್ರೆ: ಪಾದಯಾತ್ರೆ ವಿಚಾರವಾಗಿ ನಾಳೆ ಸಭೆ ನಡೆಸಲಿದ್ದು, ಸಭೆ ನಂತರ ಪಾದಯಾತ್ರೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News