ದಾವಣಗೆರೆ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಸ್ಥಾನ ಬಿಜೆಪಿ ತೆಕ್ಕೆಗೆ

Update: 2021-02-24 16:29 GMT

ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ಪಾಲಿಕೆಯನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ  ಯಶಸ್ವಿಯಾಗಿದೆ.

ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್.ಟಿ.ವೀರೇಶ್, ಕಾಂಗ್ರೆಸ್‍ನ ಜಿ.ಎಸ್.ಮಂಜುನಾಥ್ ಗಡಿಗುಡಾಳ ನಾಮಪತ್ರ ಸಲ್ಲಿಸಿದ್ದರು.

ಎಸ್.ಟಿ.ವೀರೇಶ್ 29 ಮತ ಪಡೆಯುವ ಮೂಲಕ ಪಾಲಿಕೆ ಮೇಯರ್ ಸ್ಥಾನ ಅಲಂಕರಿಸಿದರು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪ ಜಯಪ್ರಕಾಶ್, ಕಾಂಗ್ರೆಸ್‍ನಿಂದ ನಾಗರತ್ನಮ್ಮ ನಾಮಪತ್ರ ಸಲ್ಲಿಸಿದ್ದರು. ಶಿಲ್ಪ ಜಯಪ್ರಕಾಶ್ 29 ಮತ ಪಡೆದು ಉಪಮೇಯರ್ ಸ್ಥಾನ ಅಲಂಕರಿಸಿದ್ದಾರೆ.  

ಪಾಲಿಕೆಯ ಒಟ್ಟು 58 ಮತದಾರರದಲ್ಲಿ ಬಿಜೆಪಿಯ 16 ಪಾಲಿಕೆ ಸದಸ್ಯರು, ಪಕ್ಷೇತರರು ನಾಲ್ವರು, ಸಂಸದ ಜಿ.ಎಂ.ಸಿದ್ದೇಶ್ವರ, ಸಚಿವ ಆರ್.ಶಂಕರ್, ಶಾಸಕ ಎಸ್.ಎ.ರವೀಂದ್ರನಾಥ್, ವಿಪ ಸದಸ್ಯರಾದ ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಲೇಹರ್ ಸಿಂಗ್, ಕೆ.ಪಿ.ನಂಜುಂಡಿ, ಹನುಮಂತ ನಿರಾಣಿ, ಎಂ.ಚಿದಾನಂದ ಸೇರಿ ಒಟ್ಟು 29 ಹಾಗೂ 1 ಪಕ್ಷೇತರ ಸೇರಿ ಕಾಂಗ್ರೆಸ್ ನ 20 ಪಾಲಿಕೆ ಸದಸ್ಯರು, ವಿಪ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ ಸೇರಿ ಒಟ್ಟು 22 ಜನ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾಧಿಕಾರಿಗಳಾಗಿ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಇತರರು ಭಾಗವಹಿಸಿದ್ದರು. ಚುನಾವಣೆ ಹಿನ್ನಲೆಯಲ್ಲಿ ಪಾಲಿಕೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಅಭಿವೃದ್ದಿಗೆ ಬದ್ಧ: ನೂತನ ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ವೀರೇಶ್, ನಗರದ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ದಿ ನಡೆಸಲು ಬದ್ದರಾಗಿದ್ದೇವೆ. ನಗರದ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ವಾಟ್ಸ್ ಆ್ಯಪ್ ಗ್ರೂಪ್ ಮಾಡುತ್ತೇವೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಅವಕಾಶ ನೀಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದೆ ಸಮರ್ಪಕವಾಗಿ ಆಡಳಿತ ನೀಡುತ್ತೇನೆ ಎಂದರು.

ಅಪರೇಷನ ಕಮಲ ನಡೆಸಿಲ್ಲ

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಾಂಗ್ರೆಸ್ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬೇಸತ್ತು ಬಂದಿದ್ದಾರೆ. ನಾವು ಯಾವುದೇ ಅಪರೇಷನ್ ಮಾಡಿಲ್ಲ. 21 ಪಾಲಿಕೆ ಸದಸ್ಯರು ಮೇಯರ್ ಆಕಾಂಕ್ಷಿಗಳಾಗಿದ್ದಾರೆ. ಕೋರ್ ಕಮಿಟಿ ತೀರ್ಮಾನದಂತೆ ಎಸ್.ಟಿ.ವೀರೇಶ್ ಆಯ್ಕೆಯಾಗಿದ್ದಾರೆ ಎಂದರು.  

ಗೈರು: ಈ ಮಧ್ಯೆ ಪತಿಯ ಅನಾರೋಗ್ಯದಿಂದಾಗಿ ಬಿಜೆಪಿ ಸದಸ್ಯೆ ಜಯಮ್ಮ ಗೋಪಿನಾಯ್ಕ್ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರು. ಸಂಖ್ಯಾ ಬಲದಲ್ಲಿ ಪಾಲಿಕೆ ಗದ್ದುಗೆ ಅನಾಯಾಸವಾಗಿ ಬಿಜೆಪಿಗೆ ತೆಕ್ಕೆಗೆ ಹೋಗಲಿದೆ ಎಂದು ಮನಗಂಡ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ವಿಪ ಸದಸ್ಯರಾದ ರಘು ಆಚಾರ್ಯ, ಕೆ.ಸಿ.ಕೊಂಡಯ್ಯ, ಯು.ಬಿ.ವೆಂಕಟೇಶ್ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದರು.

ಕಳೆದ ತಿಂಗಳಿಂದ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‍ನ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್ ಕೊನೆಗಳಿಗೆಯಲ್ಲಿ ಬುಧವಾರ ರಾತ್ರಿ ಪ್ರಾಥಮಿಕ ಸದಸ್ಯತ್ವ ಮತ್ತು ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಕಳೆದ ಒಂದು ವಾರದಿಂದ ಪಾಲಿಕೆ ಆಡಳಿತ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಆಂತರಿಕವಾಗಿ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಅಂತಿಮ ತೆರೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News