ಶಾಲಾ ಶುಲ್ಕ ಕಡಿತ ಪ್ರಶ್ನಿಸಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-02-24 16:44 GMT

ಬೆಂಗಳೂರು, ಫೆ.24: ಖಾಸಗಿ ಶಾಲೆಗಳಲ್ಲಿ ಶೇ.30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ (ಕ್ಯಾಮ್ಸ್) ಸಂಘಟನೆ ಹಾಗೂ 5 ಖಾಸಗಿ ಶಾಲೆಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ: ಲಾಕ್‌ಡೌನ್ ಬಳಿಕ ಇತರೆ ಕ್ಷೇತ್ರಗಳಂತೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳೂ ಕೂಡ ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕ್ಯಾಮ್ಸ್ ಸಂಘಟನೆ ಅಡಿಯಲ್ಲಿ ರಾಜ್ಯಾದ್ಯಂತ 3655 ಖಾಸಗಿ ಅನುದಾನ ರಹಿತ ಶಾಲೆಗಳಿದ್ದು, ಇಲ್ಲಿ 55 ಸಾವಿರ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಿಕ್ಷಣ ಇಲಾಖೆ 2020ರ ಮಾರ್ಚ್ 30ರಂದು ಹೊರಡಿಸಿದ ಆದೇಶದಂತೆ 2020-2021ನೇ ಸಾಲಿನಲ್ಲಿ ಯಾವುದೇ ದಾಖಲಾತಿ ಮಾಡಿಕೊಂಡಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕ ಕೂಡ ಸಂಗ್ರಹಿಸಿಲ್ಲ. ಹೀಗಾಗಿ ಶಾಲೆಗಳ ನಿರ್ವಹಣೆ ಅತ್ಯಂತ ಕಷ್ಟವಾಗಿದೆ. ಶಾಲೆಗಳ ಶಿಕ್ಷಕರಿಗೆ, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗಿಲ್ಲ.

2021ರ ಜನವರಿ 29ರಂದು ಶಿಕ್ಷಣ ಇಲಾಖೆ ಭೋದನಾ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡಿ, ಶೇ 70ರಷ್ಟನ್ನು ಮಾತ್ರ ಶುಲ್ಕ ಸಂಗ್ರಹಿಸುವಂತೆ ಹಾಗೂ ಬೇರಾವುದೇ ಶುಲ್ಕ ಸಂಗ್ರಹಿಸದಂತೆ ಆದೇಶ ಹೊರಡಿಸಿದೆ. ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ಸರಕಾರಕ್ಕಿಲ್ಲ. ಹೀಗಾಗಿ, ಸರಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News