ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು: ವಿಳಾಸ ಪತ್ತೆಗೆ ಮುಖ್ಯ ಕಾರ್ಯದರ್ಶಿಗೆ ಸಿಎಂ ಬಿಎಸ್‍ವೈ ಪತ್ರ

Update: 2021-02-24 17:11 GMT

ಬೆಂಗಳೂರು, ಫೆ. 24: ರಾಜ್ಯ ಸರಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಅನಾಮಧೇಯ ದೂರುಗಳು ಹೆಚ್ಚಾಗಿ ಬರುತ್ತಿವೆ. ಅನಾಮಧೇಯ ದೂರುಗಳ ವಿಳಾಸ ಪತ್ತೆ ಮಾಡಿ ಪ್ರಾಥಮಿಕ ತನಿಖೆ ಮತ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಗೆ ಸೂಚಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರ ಬರೆದಿರುವ ಅವರು, ರಾಜ್ಯ ಸರಕಾರಿ ನೌಕರರ ಸಂಘದ ಮನವಿ ಆಧರಿಸಿ ಮುಖ್ಯಮಂತ್ರಿ ಪತ್ರ ಬರೆದಿದ್ದು, ದೂರುದಾರರು ಪೂರಕ ದಾಖಲೆ ನೀಡಿದರೆ ನೌಕರರು, ಅಧಿಕಾರಿಗಳ ವಿರುದ್ಧ ತನಿಖೆ ಮಾಡಬಹುದು. ಬೇನಾಮಿ ದೂರುಗಳಿಂದ ಅನಗತ್ಯವಾಗಿ ತನಿಖೆಗೆ ವಿಚಾರಣೆಗೆ ಒಳಪಡಿಸುವುದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡಿದಂತಾಗುತ್ತದೆ.

ಅಲ್ಲದೆ, ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ದಕ್ಷ ಹಾಗೂ ಪ್ರಾಮಾಣಿಕ ನೌಕರರಿಗೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ಆಡಳಿತಾತ್ಮಕ ಸಮಸ್ಯೆಗಳು ಉದ್ಭವವಾಗಿ ಸರಕಾರಿ ಕೆಲಸಗಳು, ಯೋಜನೆಗಳಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಿ ಮುಕ್ತ ಮತ್ತು ನಿರ್ಭೀತಿಯಿಂದ ಸರಕಾರಿ ಅಧಿಕಾರಿಗಳು, ನೌಕರರು ಕರ್ತವ್ಯ ನಿರ್ವಹಿಸಲು ಅನುಕೂಲ ಕಲ್ಪಿಸಲು ಸರಕಾರಿ ನೌಕರರ ಸಂಘ ಮನವಿ ಮಾಡಿದ್ದಾರೆ.

ಹೀಗಾಗಿ ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ, ರಾಜ್ಯ ಸರಕಾರಿ ಅಧಿಕಾರಿ/ನೌಕರರು ಮುಕ್ತ ಮತ್ತು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಕಾನೂನಿನ ದುರುಪಯೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಈ ಹಿಂದಿನ ಆದೇಶ ಮಾರ್ಪಡಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News