‘ಅನುಗ್ರಹ' ಯೋಜನೆಯಡಿ ಹಣ ಬಿಡುಗಡೆ ಒತ್ತಾಯ: ಪಶುಪಾಲಕರ ಹಿತರಕ್ಷಣೆಗೆ ಬಿಎಸ್‍ವೈಗೆ ಸಿದ್ದರಾಮಯ್ಯ ಆಗ್ರಹ

Update: 2021-02-24 17:33 GMT

ಬೆಂಗಳೂರು, ಫೆ. 24: ‘ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆ, ಹಸು, ಎಮ್ಮೆಗಳಿಗೆ ‘ಅನುಗ್ರಹ' ಯೋಜನೆಯಡಿ ಈ ಹಿಂದೆ ನೀಡುತ್ತಿದ್ದ ಹಾಗೆ 5 ಸಾವಿರ ರೂ.ನಿಂದ 10 ಸಾವಿರ ರೂ.ಪರಿಹಾರ ನೀಡಿ ಬಡ ರೈತ ಮತ್ತು ಪಶುಪಾಲಕರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ‘ವಿಷಕಾರಿ ಮೇವು' ತಿಂದು ಸಾವನ್ನಪ್ಪಿದ ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತ್ತಣ್ಣ ಎಂಬುವವರ ಮರಣ ಹೊಂದಿದ 200 ಕುರಿಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಶಿರಾ ಕುಂಟನಹಟ್ಟಿ ಗ್ರಾಮದ ಚಿತ್ತಣ್ಣ ಎಂಬುವವರಿಗೆ ಸೇರಿದ 200 ಕುರಿಗಳು ವಿಷಕಾರಿ ಮೇವನ್ನು ತಿಂದು ಕಡೂರು ತಾಲೂಕಿನ ಹುಲಿಯನಹಳ್ಳಿ ಗ್ರಾಮದ ಬಳಿ ಸಾವನ್ನಪ್ಪಿವೆ. ಕುರಿಗಾಹಿಗಳು ಊರಿಂದ ಊರಿಗೆ ವಲಸೆ ಹೋಗುವಾಗ ರಾಜ್ಯದ ಉದ್ದಗಲಕ್ಕೂ ಪದೇ ಪದೇ ಈ ರೀತಿಯ ದುರಂತಗಳು ಸಂಭವಿಸುತ್ತಲೇ ಇವೆ. ಈ ರೀತಿಯ ಒಂದೊಂದು ದುರಂತಗಳೂ ಪಶುಪಾಲಕರ ಬದುಕನ್ನು ನಾಶಮಾಡುತ್ತವೆ ಎಂದು ಗಮನ ಸೆಳೆದಿದ್ದಾರೆ.

ಈ ರೀತಿಯ ದುರಂತಗಳನ್ನು ತಡೆದುಕೊಳ್ಳುವ ಶಕ್ತಿ ಬಡ ಪಶುಪಾಲಕರಿಗೆ ಬರಲಿ ಎಂಬ ಕಾರಣಕ್ಕಾಗಿ ಈ ಹಿಂದೆ ನಾವು ‘ಅನುಗ್ರಹ' ಯೋಜನೆಯನ್ನು ಜಾರಿಗೆ ತಂದಿದ್ದೆವು. ಅದರಿಂದಾಗಿ ಸಾವಿರಾರು ರೈತರಿಗೆ, ಪಶುಪಾಲಕರಿಗೆ ಸಹಾಯವಾಗಿತ್ತು. ಆದರೆ ನೀವು ಏಕಾಏಕಿ ಈ ಯೋಜನೆಯನ್ನು ನಿಲ್ಲಿಸಿ ಪಶುಪಾಲಕ ವಿರೋಧಿ ನಿಲುವನ್ನು ತೆಗೆದುಕೊಂಡಿದ್ದೀರಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಆಕಸ್ಮಿಕ ದುರಂತಗಳಲ್ಲಿ ಮರಣ ಹೊಂದಿದ ಕುರಿ, ಮೇಕೆ, ಹಸು, ಎಮ್ಮೆಗಳಿಗೆ ಕೂಡಲೇ ಪರಿಹಾರ ನೀಡಿ ಎಂದು ವಿಧಾನಸಭೆಯಲ್ಲೂ ಆಗ್ರಹಿಸಿದ್ದೆ. ಆದರೆ ಸರಕಾರ ಪಶುಪಾಲಕರನ್ನು ಮತ್ತು ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಈ ಯೋಜನೆಗೆ ನೂರಾರು ಕೋಟಿ ರೂ.ಗಳ ಅಗತ್ಯವಿಲ್ಲ. ವರ್ಷಕ್ಕೆ 50 ಕೋಟಿ ರೂ.ಮೀಸಲಿಟ್ಟರೆ ಸಾಕು. ಪಶುಪಾಲಕರ, ರೈತರ ಮನೆಗಳ ದೀಪ ನೆಮ್ಮದಿಯಿಂದ ಬೆಳಗುತ್ತವೆ. ಅಷ್ಟನ್ನೂ ಮಾಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಇದು ನಿಮ್ಮ ಸರಕಾರದ ಜನ ವಿರೋಧಿ ನಡೆಯಲ್ಲದೆ ಬೇರೇನೂ ಅಲ್ಲ. ಈ ವರ್ಗಗಳನ್ನು ನಿರ್ಲಕ್ಷಿಸಬಾರದು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News