ಅಗತ್ಯ ವಸ್ತುಗಳ ಮೇಲಿನ ಸೆಸ್ ಇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಒತ್ತಾಯ

Update: 2021-02-24 17:39 GMT

ಬೆಂಗಳೂರು, ಫೆ.24: ದಿನನಿತ್ಯದ ಅಗತ್ಯವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇದರಿಂದ, ಜನ ಸಾಮಾನ್ಯರಿಗೆ ಜೀವನ ಮಾಡುವುದು ಕಷ್ಟಕರವಾಗುತ್ತಿದೆ. ಈ ಕೂಡಲೇ ರಾಜ್ಯ ಸರಕಾರ ಸೆಸ್(ಹೆಚ್ಚುವರಿಯಾಗಿ ಮೇಲ್ತೆರಿಗೆ ವಿಧಿಸುವ ಪ್ರಕ್ರಿಯೆ) ಕಡಿಮೆ ಮಾಡಬೇಕು ಹಾಗೂ ಕೇಂದ್ರ ಸರಕಾರ ಬೆಲೆಯನ್ನು ಇಳಿಸಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರು ನಗರ ಜೆಡಿಎಸ್ ಘಟಕ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.

2023ರ ವಿಧಾನಸಭೆ ಚುನಾವಣೆವರೆಗೂ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟ ಮಾಡಲಾಗುವುದು. ರೈತರು, ಕಾರ್ಮಿಕರಿಗಾಗುತ್ತಿರುವ ಅನ್ಯಾಯದ ವಿರುದ್ಧವೂ ಜೆಡಿಎಸ್ ಹೋರಾಟ ನಡೆಸಲಿದೆ. ನಾವು ನಡೆಸುವ ಪ್ರತಿಭಟನೆ, ಹೋರಾಟವನ್ನು ವೈಯಕ್ತಿಕವಾಗಿ ಸರಕಾರ ತೆಗೆದುಕೊಳ್ಳದೆ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಜನರ ನಂಬಿಕೆ, ವಿಶ್ವಾಸ ಗಳಿಸುವ ರೀತಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲ 28 ಕ್ಷೇತ್ರಗಳಲ್ಲೂ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಜೆಡಿಎಸ್ ಕಚೇರಿ ಜೆಪಿ ಭವನದಿಂದ ಆನಂದರಾವ್ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ಸಿಲಿಂಡರ್‍ಗಳನ್ನು ತಲೆ ಮೇಲೆ ಹೊತ್ತು ಅಗತ್ಯ ವಸ್ತು ಹಾಗೂ ತೈಲ ಬೆಲೆ ಏರಿಕೆಯನ್ನು ವಿರೋಧಿಸಲಾಯಿತು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್ ಗೌಡ, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಪಕ್ಷದ ಮುಖಂಡರಾದ ಮುನೇಗೌಡ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಕಾವೇರಿ ನೀರು ಬಿಟ್ಟು ಕೊಡುವುದಿಲ್ಲ

‘ಕಾವೇರಿ ವಿಚಾರದಲ್ಲಿ ಜೆಡಿಎಸ್‍ನ ನಿಲುವು ಸ್ಪಷ್ಟವಾಗಿದ್ದು, ನಮ್ಮ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಡುವುದಿಲ್ಲ. ಅದಕ್ಕಾಗಿ ಹೋರಾಟ ಮಾಡಲೂ ಸಿದ್ಧವಾಗಿದ್ದೇವೆ.’

- ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

ಮಹಿಳಾ ಸಮಾವೇಶ ಮಾಡುವ ಉದ್ದೇಶವಿದೆ

‘ಮಾರ್ಚ್ ಮೊದಲ ವಾರದ ನಂತರ ಜೆಡಿಎಸ್ ತಿಂಗಳಿಗೆ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಮಹಿಳಾ ಸಮಾವೇಶವನ್ನು ಮಾಡುವ ಉದ್ದೇಶವಿದೆ. ಫೆ.27ರಂದು ಮಹಿಳಾ ಹೋರಾಟಗಾರರಿಗೆ ಕಿಟ್ ಕೊಡುವ ಕಾರ್ಯಕ್ರಮವಿದೆ. ಅದರಲ್ಲಿ ಭಾಗವಹಿಸುತ್ತೇವೆ.’

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News