ಚಿಕ್ಕಮಗಳೂರು: ಮೇಯಲು ಬಂದಿದ್ದ ಕುರಿಗಳ ಸಾಮೂಹಿಕ ಸಾವು

Update: 2021-02-24 17:43 GMT

ಚಿಕ್ಕಮಗಳೂರು, ಫೆ.24: ಹೊರ ಜಿಲ್ಲೆಗಳಿಂದ ಮೇಯಲು ಆಗಮಿಸಿದ್ದ 250ಕ್ಕೂ ಹೆಚ್ಚು ಕುರಿಗಳ ಪೈಕಿ ಒಂದೇ ದಿನ 46 ಕುರಿಗಳು ಸಾಮೂಹಿಕವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಗ್ರಾಮದಲ್ಲಿ ವರದಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಶಿರಾ, ಹಿರಿಯೂರು ಗ್ರಾಮಗಳ ಕುರಿಗಳ ಮಾಲಕರು ಇತ್ತೀಚೆಗೆ ತಮ್ಮ 250ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುತ್ತಾ ಚಿಕ್ಕಮಗಳೂರು ಜಿಲ್ಲೆಯತ್ತ ಆಗಮಿಸಿದ್ದರು. ಕಡೂರು ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಬೀಡು ಬಿಟ್ಟಿದ್ದ ಈ ಕುರಿಗಳ ಮಾಲಕರು ಗ್ರಾಮದ ಸುತ್ತಮುತ್ತ ಕುರಿಗಳನ್ನು ಮೇಯಿಸುತ್ತಿದ್ದರು. ಕಡೂರು ತಾಲೂಕಿನಲ್ಲಿ ಕಳೆದ ರವಿವಾರ ಧಾರಾಕಾರ ಮಳೆಯಾಗಿದ್ದು, ಈ ಮಳೆ ನೀರಿನಲ್ಲಿ ಎಲ್ಲ ಕುರಿಗಳು ನೆನೆದಿದ್ದವು. ಮಂಗಳವಾರ ರಾತ್ರಿ 250 ಕುರಿಗಳ ಪೈಕಿ ಕೆಲ ಕುರಿಗಳು ಅಸ್ವಸ್ಥವಾಗಿದ್ದವು. ರಾತ್ರಿ 10ರ ಹೊತ್ತಿನಲ್ಲಿ 46 ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಬುಧವಾರ ಬೆಳಗ್ಗೆ ಮತ್ತೆ ಕೆಲವು ಕುರಿಗಳು ಅಸ್ವಸ್ಥಗೊಂಡಿದ್ದು, ಕೆಲವು ಕುರಿಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದ್ದು, ಸುದ್ದಿ ತಿಳಿದ ತಕ್ಷಣ ಕೂಡುರು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚು ಹೊತ್ತು ಮಳೆ ನೀರಿನಲ್ಲಿ ಕುರಿಗಳು ನೆನೆದಿರುವ ಪರಿಣಾಮ ಕುರಿಗಳು ಅಸ್ವಸ್ಥಗೊಂಡು ಸಾವಿಗೀಡಾಗಿವೆ ಎನ್ನಲಾಗುತ್ತಿದ್ದು, ಸಾವನ್ನಪ್ಪಿರುವ ಕುರಿಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯಿಂದ ಕುರಿಗಳ ಸಾವಿನ ಬಗ್ಗೆ ನಿಖರ ಮಾಹಿತಿ ತಿಳಿದು ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News