ರಾಜ್ಯದೊಳಗೆ ಬರಲು ಯಾರಿಗೂ ನಿಷೇಧ ಹೇರಿಲ್ಲ: ಸಚಿವ ಡಾ.ಸುಧಾಕರ್ ಸ್ಪಷ್ಟನೆ

Update: 2021-02-24 18:17 GMT

ಬೆಂಗಳೂರು, ಫೆ. 24: ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಆದರೆ, ರಾಜ್ಯದೊಳಗೆ ಬರಲು ಯಾರಿಗೂ ನಿಷೇಧ ಹೇರಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ಯೋಗದಕ್ಷಿಣಾಮೂರ್ತಿ ದೇವಸ್ಥಾನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾಗಿ ಹರಡುತ್ತಿರುವುದರಿಂದ ಈ ಕ್ರಮ ವಹಿಸಲಾಗಿದೆ. ಈ ಕುರಿತು ಮಾರ್ಗಸೂಚಿಯನ್ನು ನೀಡಲಾಗಿದೆ. ಆದರೆ ಕೆಲವೆಡೆ ಗೊಂದಲ ಉಂಟಾಗಿದೆ ಎಂದು ಸುಧಾಕರ್ ತಿಳಿಸಿದರು.

ಪೂರ್ವದ ರಾಷ್ಟ್ರದಲ್ಲಿ ಯೋಗ, ಅಧ್ಯಾತ್ಮವಿದೆ. ಪಶ್ಚಿಮದ ರಾಷ್ಟ್ರಗಳಲ್ಲಿ ಆಧುನಿಕ ವಿಜ್ಞಾನವಿದೆ. ಇವೆರಡನ್ನೂ ಒಂದುಗೂಡಿಸಿ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದ ಅವರು, ಸ್ವಾಮಿ ವಿವೇಕಾನಂದರ ಆಶಯಗಳನ್ನು ಈ ಕಾಲೇಜು ಈಡೇರಿಸುತ್ತಿದೆ. ಸುಶ್ರುತ, ಚರಕ ಮೊದಲಾದವರ ಪುರಾತನ ಜ್ಞಾನವನ್ನು ಬಳಸಿಕೊಂಡು ಹೊಸ ಆವಿಷ್ಕಾರ ಮಾಡುವ ನಿಟ್ಟಿನಲ್ಲಿ ಪ್ರಯೋಗಗಳು ನಡೆಯಬೇಕೆಂದ ಅವರು, ಹಾರ್ವರ್ಡ್ ವಿವಿ ಪ್ರಯೋಗದಲ್ಲಿ ಶೇ.80ರಷ್ಟು ಜನರು ಹಣ ಸಂಗ್ರಹಿಸಿದರೆ ಹೆಚ್ಚು ಸಂತೋಷವಾಗಿರುತ್ತೇವೆ ಎಂದರು.

ಇನ್ನೂ ಕೆಲವರು ಹೆಸರು ಮಾಡಿದರೆ ಸಂತಸವಾಗಿರುತ್ತೇವೆ. ಶ್ರೀಮಂತರನ್ನು ವಿಚಾರಿಸಿದಾಗ ಅವರೆಲ್ಲರೂ ಸರಿಯಾಗಿ ನಿದ್ದೆ ಮಾಡುತ್ತಿಲ್ಲ, ನೆಮ್ಮದಿಯಿಂದ ಬದುಕುತ್ತಿಲ್ಲ ಎಂದು ತಿಳಿದುಬಂತು. ಸಂಪತ್ತು ಒಂದು ವಸ್ತುವೇ ಹೊರತು ಅದೇ ನಮ್ಮ ಜೀವನವನ್ನು ಆಳಬಾರದು. ಈ ಸೂಕ್ಷ್ಮವನ್ನು ತಿಳಿಯಲು ಯೋಗ, ಏಕತೆಯ ಬಗ್ಗೆ ತಿಳಿಯಬೇಕು. ಇದನ್ನು ಎಸ್-ವ್ಯಾಸದಂತಹ ಸಂಸ್ಥೆಗಳಲ್ಲಿ ಮಾತ್ರ ಕಲಿಯಬಹುದೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಗೆ ಸೀಸೆಗೆ ಕಲ್ಲು ತುಂಬಿ ನೀರು ಕುಡಿಯುವಂತೆ, ವಿದ್ಯಾರ್ಥಿ ತಾಳ್ಮೆ, ಪರಿಶ್ರಮ ಹೊಂದಿರಬೇಕು. ವಿದ್ಯಾರ್ಥಿಗಳು ಸಣ್ಣ ವಿಚಾರಗಳಿಗಾಗಿ ಗುರಿಯನ್ನು ಕೈಬಿಡಬಾರದು. ಕ್ಷುಲ್ಲಕ ಆಸೆ, ಆಮಿಷಗಳನ್ನು ಬಿಡಬೇಕು. ಶ್ವಾನ ನಿದ್ದೆ ಮಾಡುವಂತೆ ಕಂಡರೂ ಅದು ಸದಾ ಎಚ್ಚರವಾಗಿರುತ್ತದೆ. ಹೀಗೆ ವಿದ್ಯಾರ್ಥಿಗಳು ಸದಾ ಎಚ್ಚರವಾಗಿದ್ದು, ಗುರಿ ಕಡೆ ಏಕಾಗ್ರತೆ ಹೊಂದಿರಬೇಕು ಎಂದು ಅವರು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News