ನಿದ್ರಿಸುವಂತೆ ನಟಿಸುವವರನ್ನು ಎಬ್ಬಿಸಬಹುದೇ?

Update: 2021-02-25 05:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಶಾ ರವಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ನ್ಯಾಯಾಲಯ ನೀಡಿದ ಕಿವಿಮಾತು ಸರಕಾರವನ್ನು ಎಚ್ಚರಿಸಬಹುದು ಅಥವಾ ಅದರ ನೀತಿಯಲ್ಲಿ ಬದಲಾವಣೆ ತರಬಹುದು ಎಂದು ನಾವು ನಿರೀಕ್ಷಿಸುವಂತಿಲ್ಲ. ಯಾಕೆಂದರೆ, ಸರಕಾರ ನಿದ್ರಿಸುತ್ತಿಲ್ಲ, ನಿದ್ರಿಸುವಂತೆ ನಟಿಸುತ್ತಿದೆ. ಇಷ್ಟಕ್ಕೂ ಯಾವೊಂದು ಅಪರಾಧವನ್ನು ಮಾಡದೇ ಇದ್ದರೂ ಬಂಧನಕ್ಕೊಳಗಾಗಿದ್ದ ದಿಶಾ ರವಿಗೆ ಜಾಮೀನು ಸಿಕ್ಕಿರುವುದನ್ನೇ ಪ್ರಜಾಸತ್ತೆಗೆ ಸಿಕ್ಕಿದ ವಿಜಯವೆಂಬಂತೆ ಆಚರಿಸಿ ತೃಪ್ತಿ ಪಡಬೇಕಾದ ದಿನಗಳಲ್ಲಿ ದೇಶ ನಿಂತಿದೆ. ಇದೇ ಹೊತ್ತಿನಲ್ಲಿ, ರಾಜಕಾರಣಿಯೊಬ್ಬ ‘ದಿಲ್ಲಿ ಗಲಭೆಯ ಸಂದರ್ಭದಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣಕ್ಕೆ ನಾನು ಪಶ್ಚಾತ್ತಾಪ ಪಡುವುದಿಲ್ಲ, ಅಗತ್ಯ ಬಿದ್ದರೆ ಇನ್ನೂ ಅಂತಹ ಭಾಷಣವನ್ನು ಮಾಡುತ್ತೇನೆ’ ಎಂದು ಹೇಳುತ್ತಾನೆ. ದಿಲ್ಲಿ ಗಲಭೆಗೆ ಸಂಬಂಧಿಸಿ ಈತನನ್ನು ಪೊಲೀಸರು ಎಂದೋ ಬಂಧಿಸಬೇಕಾಗಿತ್ತು. ಕನಿಷ್ಠ, ಎರಡು ದಿನಗಳ ಹಿಂದೆ, ತನ್ನ ಭಾಷಣವನ್ನು ಸಮರ್ಥಿಸಿ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಾದರೂ ಆತನನ್ನು ಪೊಲೀಸರು ಜೈಲಿಗೆ ತಳ್ಳಬೇಕಾಗಿತ್ತು.

ಜನವರಿ 26ರಂದು ನಡೆದ ಗಲಭೆಗೆ ಸಂಬಂಧಿಸಿ ದೂರದ ಬೆಂಗಳೂರಿನಲ್ಲಿ ವಾಸಿಸುತ್ತಿರುವ 22 ವರ್ಷದ ಯವತಿಯನ್ನು ಟೂಲ್‌ಕಿಟ್ ವಿತರಿಸಿದ ಆರೋಪದಲ್ಲಿ ಬಂಧಿಸಿದ ಪೊಲೀಸರಿಗೆ, ಪೊಲೀಸ್ ಠಾಣೆಯ ಅಂಗಳದಲ್ಲೇ ನಿಂತು, ದಿಲ್ಲಿ ಗಲಭೆಗೆ ಪ್ರಚೋದನೆ ನೀಡಿದಾತನನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಆತ ಭಾಷಣದ ಪ್ರಚೋದನೆಯಿಂದಾಗಿ ದಿಲ್ಲಿಯಲ್ಲಿ ಗಲಭೆ ನಡೆದು 40ಕ್ಕೂ ಅಧಿಕ ಅಮಾಯಕರನ್ನು ಬಲಿತೆಗೆದುಕೊಂಡಿದೆ. ಇದಕ್ಕೆ ಹೋಲಿಸಿದರೆ ಜನವರಿ 26ರಂದು ಸಂಭವಿಸಿರುವುದು ಏನೇನು ಅಲ್ಲ. ದಿಶಾ ರವಿಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಸರಕಾರಕ್ಕೆ ನೀಡಿರುವ ಉಪದೇಶ ಹೀಗಿದೆ; ‘‘ಯಾವುದೇ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಪೌರರು ಸರಕಾರದ ಆತ್ಮಸಾಕ್ಷಿಯ ಪಾಲಕರಾಗಿದ್ದಾರೆ. ಸರಕಾರದ ನೀತಿಗಳನ್ನು ಒಪ್ಪಿಕೊಳ್ಳಲಿಲ್ಲವೆಂಬ ಕಾರಣಕ್ಕೆ ಅವರನ್ನು ಜೈಲು ಕಂಬಿಗಳ ಹಿಂದಿರಿಸಲು ಸಾಧ್ಯವಿಲ್ಲ.

ವಾಕ್ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ ವು ಉಲ್ಲಂಘಿಸಲಾಗದಂತಹ ಮೂಲಭೂತ ಹಕ್ಕೆಂದು ಪರಿಗಣಿಸುವ ಮೂಲಕ ನಮ್ಮ ಸಂವಿಧಾನದ ಸ್ಥಾಪಕರು ಅಭಿಪ್ರಾಯಗಳ ಭಿನ್ನತೆಯನ್ನು ಗೌರವಿಸಿದ್ದಾರೆ. ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಭಾರತದ ಸಂವಿಧಾನದ 19ನೇ ವಿಧಿಯಲ್ಲಿ ದೃಢವಾಗಿ ಪ್ರತಿಪಾದಿಸಲಾಗಿದೆ’’. ದುರದೃಷ್ಟಕ್ಕೆ ಈ ದೇಶದ ಪ್ರಧಾನಿ, ತನ್ನ ನೀತಿಯನ್ನು ವಿರೋಧಿಸುವ ಲಕ್ಷಾಂತರ ರೈತರನ್ನು ಸಾರ್ವಜನಿಕವಾಗಿ ‘ಆಂದೋಲನ ಜೀವಿ’ಗಳು ಎಂದು ಈಗಾಗಲೇ ಅಪಮಾನಿಸಿದ್ದಾರೆ. ಆದುದರಿಂದಲೇ, ಒಬ್ಬ ದಿಶಾ ರವಿಗೆ ಜಾಮೀನು ನೀಡಿರುವುದರಿಂದ ಅಭಿವ್ಯಕ್ತಿ ಸ್ವಾತಂತ್ರಕ್ಕೆ ನ್ಯಾಯ ಸಿಕ್ಕಿತು ಎಂದು ನಾವು ಸಂಭ್ರಮಿಸುವಂತಿಲ್ಲ. ಯಾವ ರೀತಿಯಲ್ಲೂ ಗಂಭೀರವಾಗಿರದ ಪ್ರಕರಣ ಇದಾಗಿರುವುದರಿಂದ ಹಲವು ದಿನಗಳ ಬಳಿಕ ಜಾಮೀನು ದೊರಕಿದೆ. ಇದೇ ಸಂದರ್ಭದಲ್ಲಿ ಅಭಿವ್ಯಕ್ತಿಯನ್ನು ಪ್ರಕಟಪಡಿಸಿದ ನೂರಾರು ಯುವಕರು ಈ ದೇಶದಲ್ಲಿ ಇನ್ನೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳು. ಹಾಗೆಯೇ ಪ್ರೊಫೆಸರ್‌ಗಳು, ಚಿಂತಕರು ಕೂಡ ಸೇರಿದ್ದಾರೆ.

  ಪ್ರಧಾನಿಯವರು ಕಟ್ಟ ಹೊರಟಿರುವ ದೇಶ ಯಾವುದು ಎನ್ನುವುದು ಅವರ ಮಾತಿನಲ್ಲೇ ಸ್ಪಷ್ಟವಾಗಿದೆ. ಅವರು ಪ್ರತಿಭಟನೆಯಿಲ್ಲದ ದೇಶವೊಂದನ್ನು ಕಟ್ಟಲು ಹೊರಟಿದ್ದಾರೆ. ಪ್ರತಿಭಟಿಸುತ್ತಿರುವವರನ್ನು ಆಂದೋಲನಾ ಜೀವಿಗಳು ಎಂದು ವ್ಯಂಗ್ಯ ಮಾಡಿರುವ ಪ್ರಧಾನಿ, ಅದರ ಮುಂದುವರಿದ ಭಾಗವಾಗಿ ‘ವಿದ್ಯಾವಂತರು ದೇಶಕ್ಕೆ ಅಪಾಯಕಾರಿಗಳಾಗಿದ್ದಾರೆ’ ಎಂದೂ ಇನ್ನೊಂದೆಡೆ ಹೇಳುತ್ತಾರೆ. ಅವರಿಗೆ ಈ ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳು ಉಗ್ರರ ತಾಣವಾಗಿ ಭಾಸವಾಗುತ್ತದೆ. ಅದಕ್ಕಾಗಿಯೇ ಜೆಎನ್‌ಯುವಿನಂತಹ ಜನಪರ ವಿದ್ಯಾಸಂಸ್ಥೆಗಳನ್ನು ನಾಶ ಮಾಡುತ್ತಾ ಅಲ್ಲಿ ಗೋಶಾಲೆಗಳನ್ನು ಅಸ್ತಿತ್ವಕ್ಕೆ ತರಲು ಮುಂದಾಗುತ್ತಿದ್ದಾರೆ. ಸರಕಾರವನ್ನು ಪ್ರಶ್ನಿಸುವ ವಿದ್ಯಾರ್ಥಿಗಳನ್ನು, ಯುವಕರನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಜೈಲಿಗೆ ತಳ್ಳುತ್ತಿರುವ ಸರಕಾರ, ಮಗದೊಂದೆಡೆ ಈ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಹದಗೆಡಿಸುತ್ತಿದೆ. ಕೊರೋನದ ಹೆಸರಿನಲ್ಲಿ ಶಾಲೆಗಳಿಂದ ಹೊರಬಿದ್ದಿರುವ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗಳಿಗೆ ಸೇರಿಸುವ ಕುರಿತಂತೆ ಸರಕಾರ ವಿಶೇಷ ಆಸಕ್ತಿಯನ್ನು ಹೊಂದದೇ ಇರುವುದಕ್ಕೂ, ‘ವಿದ್ಯಾವಂತರು ಅಪಾಯಕಾರಿಗಳಾಗುತ್ತಿದ್ದಾರೆ’ ಎನ್ನುವ ಮಾತಿಗೂ ಪರಸ್ಪರ ಸಂಬಂಧವಿದೆ. ದೇಶವನ್ನು ಮನುವಾದದ ಕಾಲಕ್ಕೆ ಒಯ್ಯುವ ಸಂಚು ಇದರ ಹಿಂದಿದೆ. ಪ್ರಭುತ್ವದ ಜನವಿರೋಧಿ ನೀತಿಯನ್ನು ಪೋಷಿಸುವ, ಬೆಂಬಲಿಸುವ ವಿದ್ಯಾವಂತರನ್ನಷ್ಟೇ ಸೃಷ್ಟಿಸುವುದಕ್ಕೆ ಅದು ಮುಂದಾಗುತ್ತಿದೆ.

‘ಸಂಪೂರ್ಣ ಖಾಸಗೀಕರಣ’ದ ಕುರಿತಂತೆ ನರೇಂದ್ರ ಮೋದಿಯವರು ಈಗಾಗಲೇ ಕಹಳೆ ಮೊಳಗಿಸಿದ್ದಾರೆ. ‘ಸರಕಾರವಿರುವುದು ಉದ್ಯಮ, ವ್ಯವಹಾರ ನಡೆಸುವುದಕ್ಕಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂದರೆ ಬ್ಯಾಂಕ್, ಕೈಗಾರಿಕೆ, ಬಿಎಸ್ಸೆನ್ನೆಲ್‌ನಂತಹ ಸಂಸ್ಥೆಗಳನ್ನು ನಡೆಸುವುದು ಸರಕಾರದ ಕೆಲಸವಲ್ಲ. ಈ ಕಾರಣದಿಂದ ಅವುಗಳನ್ನೆಲ್ಲ ಖಾಸಗಿಯವರಿಗೆ ಒಪ್ಪಿಸುವುದಕ್ಕೆ ಮುಂದಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಸಾರಿಗೆ, ರೈಲು, ದೂರವಾಣಿ, ರಸ್ತೆ ಇವುಗಳನ್ನೆಲ್ಲ ಈ ದೇಶ ಉದ್ಯಮ ಎಂದು ಭಾವಿಸಿರಲಿಲ್ಲ. ಅವೆಲ್ಲವೂ ಸೇವೆಯ ಅಡಿಯಲ್ಲಿ ಬರುತ್ತಿದ್ದವು. ಜನರ ಮೂಲಭೂತ ಅಗತ್ಯಗಳನ್ನು ಈ ಮೂಲಕ ಈಡೇರಿಸುವುದು ಸರಕಾರದ ಕೆಲಸ. ಆದರೆ ಪ್ರಧಾನಿ ಮೋದಿಯ ಪ್ರಕಾರ ಇವೆಲ್ಲ ಸರಕಾರದ ಕೆಲಸವಲ್ಲ. ಇನ್ನು ಮುಂದೆ ಈ ಎಲ್ಲ ಸೇವೆಗಳನ್ನು ಖಾಸಗಿಯವರು ನಿರ್ವಹಿಸುವುದರಿಂದ ದೇಶದ ಜನರ ಸುಖ, ಕಷ್ಟಗಳನ್ನು ಖಾಸಗಿಯವರೇ ನಿರ್ಣಯಿಸಲಿದ್ದಾರೆ. ಒಂದನ್ನು ನೆನಪಿಟ್ಟುಕೊಳ್ಳಬೇಕು. ಖಾಸಗಿಯವರಿಗೆ ಈ ಎಲ್ಲ ಕ್ಷೇತ್ರಗಳು ದಂಧೆಯಷ್ಟೇ. ಸೇವೆಗಾಗಿ ಅವರು ಇದನ್ನು ವಹಿಸಿಕೊಳ್ಳುವುದಿಲ್ಲ. ಹಾಗಾದರೆ ಸರಕಾರದ ಕೆಲಸವೇನು? ಜನರು ಕಟ್ಟಿದ ತೆರಿಗೆಗಳಿಂದ ಸರಕಾರ ಏನು ಮಾಡುತ್ತದೆ? ಬಹುಶಃ ರಾಮಮಂದಿರ ನಿರ್ಮಾಣ, ಪ್ರತಿಮೆಗಳ ನಿರ್ಮಾಣ, ದಿಗ್ಬಂಧನ ಕೇಂದ್ರಗಳ ನಿರ್ಮಾಣ, ತನ್ನ ವಿರುದ್ಧ ಅಂದರೆ ಖಾಸಗಿ ಉದ್ಯಮಿಗಳ ಅತಿರೇಕಗಳ ಬಗ್ಗೆ ಮಾತನಾಡುವವರನ್ನು ಹದ್ದು ಬಸ್ತಿನಲ್ಲಿಡುವುದು ಸರಕಾರದ ಕೆಲಸವಾಗಲಿದೆ. ಅಂದರೆ, ಖಾಸಗಿ ಉದ್ಯಮಿಗಳ ಚೌಕೀದಾರ್ ಕೆಲಸವನ್ನೇ ಮುಂದಿನ ದಿನಗಳಲ್ಲಿ ಸರಕಾರದ ಕೆಲಸವೆಂದು ನಾವು ಭಾವಿಸಬೇಕಾಗುತ್ತದೆ. ಜನರ ತೆರಿಗೆಯ ಹಣವನ್ನೆಲ್ಲ ಪೊಲೀಸರಿಗಾಗಿ, ಸೇನೆಗಳಿಗಾಗಿ, ಜನರನ್ನು ದಮನಿಸಲು ಬೇಕಾದ ಶಸ್ತ್ರಾಸ್ತ್ರಗಳಿಗಾಗಿ ವ್ಯಯ ಮಾಡುವ ದಿನಗಳು ಬರುತ್ತವೆ.
ಇಂತಹ ಸಂದರ್ಭದಲ್ಲಿ ದಿಶಾ ರವಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸರಕಾರಕ್ಕೆ ನೀಡಿದ ಕಿವಿ ಮಾತು, ಲಕ್ಷಾಂತರ ರಣಹದ್ದುಗಳ ಅರಚಾಟಗಳ ನಡುವೆ ಗುಬ್ಬಚ್ಚಿಯೊಂದರ ‘ಚಿಂವ್ ಚಿಂವ್’ ಸದ್ದಿನಂತೆ ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News