ಡಿಜೆ-ಕೆಜಿ ಹಳ್ಳಿ ಗಲಭೆಯನ್ನು ಪಾಪ್ಯುಲರ್ ಫ್ರಂಟ್‍ ಜೊತೆ ತಳುಕು ಹಾಕುತ್ತಿರುವುದು ಷಡ್ಯಂತ್ರದ ಭಾಗ: ಪಿಎಫ್‍ಐ

Update: 2021-02-24 18:26 GMT

ಬೆಂಗಳೂರು, ಫೆ.24: ಡಿಜೆ-ಕೆಜಿ ಹಳ್ಳಿ ಗಲಭೆಯಲ್ಲಿ ಪಾಪ್ಯುಲರ್ ಫ್ರಂಟ್‍ಗೆ ಯಾವುದೇ ಸಂಬಂಧವಿಲ್ಲದಿದ್ದರೂ ಕೆಲ ಮಾಧ್ಯಮಗಳು ವಿನಾಕಾರಣ ಸಂಘಟನೆಯನ್ನು ಘಟನೆಯೊಂದಿಗೆ ತಳುಕು ಹಾಕುತ್ತಿರುವುದು ಷಡ್ಯಂತ್ರದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದ್ದಾರೆ.

ಡಿಜೆ-ಕೆಜಿ ಹಳ್ಳಿ ಗಲಭೆಗೆ ಮೂಲ ಕಾರಣವೇ ಕಾಂಗ್ರೆಸ್ ನಾಯಕ ಸಂಪತ್ ಕುಮಾರ್ ಮತ್ತು ಆತನ ಸಂಗಡಿಗರಾಗಿದ್ದಾರೆ. ಗಲಭೆಗೆ ಸಂಬಂಧಿಸಿ ರಾಜ್ಯ ಪೊಲೀಸ್ ತಂಡವಾಗಿರುವ ಸಿಸಿಬಿ ತಾನು ಸಲ್ಲಿಸಿರುವ ಚಾರ್ಜ್ ಶೀಟ್‍ನಲ್ಲಿ ಸಂಪತ್ ಕುಮಾರ್ ಮತ್ತು ತಂಡವನ್ನು ಗಲಭೆಯ ಸಂಚುಕೋರರಾಗಿ ಗುರುತಿಸಿತ್ತು. ಆದರೆ ಇದೀಗ ಎನ್‍ಐಎ ಸಲ್ಲಿಸಿರುವ ಚಾರ್ಜ್ ಶೀಟ್‍ನಲ್ಲಿ ಗಲಭೆಯ ಹೊಣೆಯನ್ನು ಎಸ್‍ಡಿಪಿಐ ಮೇಲೆ ಹೊರೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಟಿಝನ್ಸ್ ಫಾರ್ ಡೆಮಾಕ್ರಸಿ ಹೆಸರಿನಲ್ಲಿ ಆರೆಸ್ಸೆಸ್–ಬಿಜೆಪಿ ಪ್ರಾಯೋಜಿತ ಸತ್ಯಶೋಧನಾ ವರದಿಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ಆಡಳಿತ ವ್ಯವಸ್ಥೆಯ ಘೋರ ವೈಫಲ್ಯವನ್ನು ಮರೆಮಾಚುವ ಮತ್ತು ನಿರ್ದಿಷ್ಟ ಸಮುದಾಯದ ಮೇಲೆ ಗಲಭೆಯ ಹೊಣೆ ಹೊರಿಸಿ ಘಟನೆಯನ್ನು ಕೋಮುವಾದೀಕರಣಗೊಳಿಸುವ ಅಂಶಗಳಿದ್ದವು. ಇದೀಗ ಎನ್‍ಐಎ ಸಲ್ಲಿಸಿರುವ ಆರೋಪ ಪಟ್ಟಿಯು ಅದೇ ಸತ್ಯಶೋಧನಾ ವರದಿಯಲ್ಲಿರುವ ಅಂಶಗಳನ್ನು ಆಧರಿಸಿರುವುದು ಕಂಡು ಬರುತ್ತದೆ ಎಂದರು.

ಎನ್‍ಐಎ ತನಿಖೆ ಕೂಡ ಷಡ್ಯಂತ್ರದ ಭಾಗವಾಗಿದ್ದು, ಆರೋಪ ಪಟ್ಟಿಯ ಸಲ್ಲಿಕೆಯೊಂದಿಗೆ ಅದು ಈಗ ನಿಜವಾಗಿದೆ. ಬಿಜೆಪಿ ಸರಕಾರ ಎನ್‍ಐಎಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿರುವ ಈ ಸನ್ನಿವೇಶದಲ್ಲಿ ಆರೋಪ ಪಟ್ಟಿಯ ಕುರಿತು ಸಂದೇಹಗಳು ಮೂಡುವುದು ಸಹಜವಾಗಿದೆ ಎಂದು ಹೇಳಿದರು.

ಈ ಮಧ್ಯೆ ಎಸ್.ಡಿ.ಪಿ.ಐ ಮುಖಂಡ ಮುಝಮ್ಮಿಲ್ ಪಾಷ ಆಕ್ರೋಶಿತ ಗುಂಪನ್ನು ಸಮಾಧಾನಿಸುತ್ತಾ ಕಾನೂನಾತ್ಮಕವಾಗಿ ಹೋರಾಡಲು ಕರೆ ನೀಡಿದ್ದ ವಿಚಾರವು ರಾಷ್ಟ್ರೀಯ ಮಟ್ಟದ ಮುಖ್ಯವಾಹಿನಿ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಆದರೆ ಅವರ ವಿರುದ್ಧ ಯುಎಪಿಎ ದಾಖಲಿಸಿ ಇನ್ನೂ ಜೈಲಿನಲ್ಲಿರಿಸಲಾಗಿದೆ. ಗಂಭೀರ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಭಾರೀ ಸಂಖ್ಯೆಯ ಮುಸ್ಲಿಮರನ್ನು ಯುಎಪಿಎ ಹೇರಿ ಜಾಮೀನು ನಿರಾಕರಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ. ಈ ಘಟನೆಯಲ್ಲೂ ಆಡಳಿತ ವರ್ಗವು ಪೂರ್ವಗ್ರಹಪೀಡಿತವಾಗಿ ವರ್ತಿಸಿದೆ ಮತ್ತು ತಾರತಮ್ಯ ಧೋರಣೆಯನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ. ಘಟನೆಗೆ ಸಂಬಂಧಿಸಿ ಹಲವು ಅಮಾಯಕರನ್ನು ಬಂಧಿಸಲಾಗಿದೆ ಎಂಬ ಆರೋಪ ಮೊದಲೇ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಪಾಪ್ಯುಲರ್ ಫ್ರಂಟ್ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸಲಿದೆ ಎಂದು ಎ.ಕೆ.ಅಶ್ರಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News