ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಶಾಸಕ ಶರತ್ ಬಚ್ಚೇಗೌಡ ಬಾಹ್ಯ ಬೆಂಬಲ

Update: 2021-02-25 11:47 GMT

ಬೆಂಗಳೂರು, ಫೆ. 25: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ, ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ.

ಗುರುವಾರ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಶರತ್ ಬಚ್ಚೇಗೌಡ, ಪತ್ರವೊಂದನ್ನು ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಪ್ರಕಟಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ಶಾಸಕ ಶರತ್ ಬಚ್ಚೇಗೌಡ ಅವರಿಗೆ ಪುಷ್ಪಗುಚ್ಛವನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಶಾಸಕ ಶರತ್ ಬಚ್ಚೇಗೌಡ ಅವರನ್ನು ಮೂಲೆಗುಂಪು ಮಾಡುವ ಬಿಜೆಪಿ ಸರಕಾರದ ಹುನ್ನಾರವನ್ನು ಖಂಡಿಸುವ ಜೊತೆಗೆ, ಹೊಸಕೋಟೆಯಲ್ಲಿ ನಡೆಯುತ್ತಿರುವ ಅಧಿಕಾರದ ದುರ್ಬಳಕೆ ಮತ್ತು ಅಕ್ರಮಗಳ ವಿರುದ್ಧದ ಹೋರಾಟಕ್ಕೆ ಶರತ್ ಬಚ್ಚೇಗೌಡ ಅವರ ಜೊತೆ ನಾವು ಕೈಜೋಡಿಸಲಿದ್ದೇವೆ' ಎಂದು ಅಭಯ ನೀಡಿದರು.

‘ಸರಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಅಲ್ಲಿನ ಶಾಸಕರೇ ವಹಿಸಿಕೊಳ್ಳಬೇಕು. ಆದರೆ, ಹೊಸಕೋಟೆಯಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಶರತ್ ಬಚ್ಚೇಗೌಡ ಅವರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ರಾಜ್ಯ ಸರಕಾರದ ದುರಾಡಳಿತದ ವಿರುದ್ಧದ ತಮ್ಮ ಹೋರಾಟಗಳಿಗೆ ಕಾಂಗ್ರೆಸ್‍ನ ಬೆಂಬಲ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಶರತ್ ಬಚ್ಚೇಗೌಡ ಅವರು ಮತ್ತು ನಾವು ಒಟ್ಟಾಗಿ ಬಿಜೆಪಿ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ' ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಗಾಳಕ್ಕೆ ಬಿದ್ದಿರಲಿಲ್ಲ: ‘ಇದೊಂದು ಸಂಭ್ರಮ. ಹೊಸಕೋಟೆ ಜನಕ್ಕೆ ನಾನು 20-30 ವರ್ಷದಿಂದ ಗಾಳ ಹಾಕುತ್ತಲೇ ಇದ್ದೆ. ನಮ್ಮ ಗಾಳಕ್ಕೆ ನಮ್ಮ ಶಾಸಕರು ಬಿದ್ದಿರಲಿಲ್ಲ. ನೀವು (ಶರತ್ ಬಚ್ಚೇಗೌಡ) ಬಿದ್ದಿದ್ದೀರಿ. ಶಾಸಕರು ನಾನು ಸ್ವತಂತ್ರವಾಗಿಯೇ ಇರುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಹಾಗೇ ಇರಲಿ. ಅವರು ನಮ್ಮ ಬೆಂಬಲ ಕೇಳಿದ್ದು, ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅವರ ಬೆಂಬಲ ನಮ್ಮ ಪಕ್ಷಕ್ಕೆ ಇರುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಇಂತಹ ಪವಿತ್ರ ಸಂದರ್ಭಕ್ಕೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಈ ಆಟಕ್ಕೆ ನಾವು ಏನೇನು ಪಗಡೆ ಆಡಿದ್ದೆವು ಎಂಬುದರ ಬಗ್ಗೆ ಸಿ.ಎಂ.ಲಿಂಗಪ್ಪ ಅವರಿಗೆ ಗೊತ್ತಿದೆ. ಇದರ ಬಗ್ಗೆ ಹೆಚ್ಚಿಗೆ ಚರ್ಚೆ ಬೇಡ. ನಾವು ನಿಮ್ಮಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನೀವು ಬಹಳ ಶಿಸ್ತಿನಿಂದ ಕೆಲಸ ಮಾಡಬೇಕು. ನಮ್ಮ ಶಾಸಕಾಂಗ ಪಕ್ಷದ ನಾಯಕರು, ಶಾಸಕರು ಎಲ್ಲರೂ ನಿಮಗೆ ಬೆಂಬಲ ನೀಡಲು ಬದ್ಧರಾಗಿದ್ದೇವೆ, ಸಿದ್ಧರಾಗಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಸಭೆ ಅಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದರೂ ನಾನೊಬ್ಬ ಶಾಸಕನಾಗಿ, ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದೇನೆ' ಎಂದು ಶಿವಕುಮಾರ್ ನುಡಿದರು.

‘ಕ್ಷೇತ್ರದಲ್ಲಿ ಆಗುತ್ತಿರುವ ವಿಭಿನ್ನ ರಾಜಕೀಯ ವಿದ್ಯಮಾನ ಗಮನಿಸಿದ್ದೇವೆ. ಕಷ್ಟದಲ್ಲಿ ನೀವು ನಮ್ಮ ಬೆಂಬಲ ಕೋರಿದ್ದೀರಿ. ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ, ನೀವು ಕೆಲಸ ಮಾಡಬೇಕೆಂದು ನಾವು ನಿಮಗೆ ಬೆಂಬಲ ನೀಡುತ್ತಿದ್ದೇವೆ. ನಿಮಗೆ ಒಳ್ಳೆಯದಾಗಲಿ. ಇಲ್ಲಿ ಕೇವಲ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕರು ಮಾತ್ರ ಈ ವೇದಿಕೆ ಮೇಲೆ ಕೂತಿಲ್ಲ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ನಿಮ್ಮ ಜತೆಗೆ ನಿಲ್ಲುತ್ತೇವೆ' ಎಂದು ಶಿವಕುಮಾರ್ ಅಭಯ ನೀಡಿದರು.

‘ಈ ರಾಜ್ಯಕ್ಕೆ ಎದುರಾಗಿರುವ ಸಂಕಷ್ಟ, ಈ ರಾಜ್ಯದಲ್ಲಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನರ ಜೀವನಮಟ್ಟ ಕುಸಿದಿದೆ. ಇದರ ವಿರುದ್ಧ ನಾವು-ನೀವೆಲ್ಲ ಸೇರಿ ಹೋರಾಟ ಮುಂದುವರಿಸೋಣ. ನಾವು ನಿಮಗೆ ಸದಾ ಬೆಂಬಲ ನೀಡುತ್ತೇವೆ' ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದರು. ಈ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News