ಕೆಎಸ್ಸಾರ್ಟಿಸಿಯಿಂದ ಕಾರ್ಗೋ, ಕೊರಿಯರ್ ಸೇವೆ ಆರಂಭ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Update: 2021-02-25 11:59 GMT

ಬೆಂಗಳೂರು, ಫೆ, 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವತಿಯಿಂದ ‘ನಮ್ಮ ಕಾರ್ಗೋ' ಪಾರ್ಸಲ್ ಮತ್ತು ಕೊರಿಯರ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ನಾಳೆ(ಫೆ.26) ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ನಷ್ಟಕ್ಕೆ ಸಿಲುಕಿದ್ದು ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಕಾರ್ಗೋ ಮತ್ತು ಕೋರಿಯರ್ ಸೇವೆ ಆರಂಭಿಸಲಾಗುತ್ತಿದೆ. ವಾರ್ಷಿಕ ಅಂದಾಜು 35 ಕೋಟಿ ರೂ.ಗಳಷ್ಟು ಆದಾಯ ಲಗೇಜ್‍ನಿಂದ ಸಂಸ್ಥೆಗೆ ಬರುತ್ತಿದ್ದು, ಈ ಹೊಸ ಸೇವೆಯಿಂದ ಸುಮಾರು 70ರಿಂದ 80 ಕೋಟಿ ರೂ.ಗಳಷ್ಟು ಆದಾಯದ ನಿರೀಕ್ಷೆ ಇದೆ' ಎಂದು ವಿವರಿಸಿದರು.

ಕೆಎಸ್ಸಾರ್ಟಿಸಿ, ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸೇರಿದಂತೆ ಮೂರು ನಿಗಮಗಳಿಂದ ಒಟ್ಟು 109 ಕಡೆಗಳಲ್ಲಿ ಹಾಗೂ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿಯೂ ಈ ಸೇವೆ ಆರಂಭಿಸಲಾಗುವುದು ಎಂದ ಅವರು, ಪಾರ್ಸಲ್, ಲೈಟ್ ಪಾರ್ಸಲ್, ಹಣ್ಣು-ತರಕಾರಿ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ರವಾನಿಸಲಾಗುವುದು.

ಪಾರ್ಸಲ್ ಬುಕಿಂಗ್, ರವಾನೆ ಮತ್ತು ಸ್ವೀಕರಣೆದಾರರಿಗೆ ಎಸ್ಸೆಮ್ಸೆಸ್ ಸಂದೇಶ ಕಳುಹಿಸಲಾಗುವುದು. ಅಲ್ಲದೆ, ಈ ಸಂಬಂಧ ದೂರುಗಳಿದ್ದರೆ ಪರಿಹಾರಕ್ಕೆ ನಗರದ ಮೈಸೂರು ರಸ್ತೆಯಲ್ಲಿನ ಟಿಟಿಎಂಸಿಯಲ್ಲಿ ದಿನದ ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚರಿಸುವ ಹಳ್ಳಿಗಳಿಗೂ ಈ ಸೇವೆಯನ್ನು ವಿಸ್ತರಿಸಿ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುವುದು ಎಂದರು.

ಸಿಟಿ ಟ್ಯಾಕ್ಸಿಗಳ ದರ ಏರಿಕೆ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಿಟಿ ಟ್ಯಾಕ್ಸಿಗಳ ಶೇ.15ರಷ್ಟು ದರ ಏರಿಕೆಗೆ ಸರಕಾರ ಒಪ್ಪಿಗೆ ನೀಡಿದೆ ಎಂದ ಅವರು, ಓಲಾ, ಉಬರ್ ಟ್ಯಾಕ್ಸಿ ದರ ಏರಿಕೆ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ. ಮೇಲ್ಕಂಡ ಎರಡು ಸಂಸ್ಥೆಗಳು ಚಾಲಕರಿಗೆ ತಾರತಮ್ಮ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ವೋಲಾ, ಉಬರ್ ಸಂಸ್ಥೆಯ ಮುಖ್ಯಸ್ಥರನ್ನು ಕರೆಸಿ ಅವರಿಗೆ ಎಚ್ಚರಿಕೆ ನೀಡುವುದು ಎಂದರು.

ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ತೀರ್ಮಾನಿಸಿದ್ದೇವೆ. ಆ ಪೈಕಿ ಈಗಾಗಲೇ ಆರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಆರೋಗ್ಯ ವಿಮೆ, ಕರ್ತವ್ಯದಲ್ಲಿದ್ದ ವೇಳೆ ಕೊರೋನ ಸೋಂಕು ತಗುಲಿ ಮೃತಪಟ್ಟ ಒಟ್ಟು 112 ಮಂದಿ ಸಿಬ್ಬಂದಿಗೆ 30 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ. ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಂತರ ನಿಗಮ ವರ್ಗಾವಣೆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್ ನಷ್ಟ: ಕೊರೋನ ಸೋಂಕಿನಿಂದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ನಾಲ್ಕು ನಿಗಮಗಳಿಗೆ ಒಟ್ಟು 2,720 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಇದನ್ನು ಸರಿದೂಗಿಸಲು ಸರಕಾರ ಉಳಿಸಿಕೊಂಡಿರುವ ವಿದ್ಯಾರ್ಥಿಗಳ ಬಸ್ ಪಾಸ್ ಬಾಕಿ 2,980 ಕೋಟಿ ರೂ.ಬರಬೇಕಿದ್ದು, ಅದನ್ನು ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹೊಸ ಬಸ್ ಖರೀದಿ: ಸಾರಿಗೆ ಸಂಸ್ಥೆಗೆ ಮೂರು ಸಾವಿರ ಹೊಸ ಬಸ್‍ಗಳನ್ನು ಖರೀದಿ ಮಾಡಲು ಉದ್ದೇಶಿಸಿದ್ದು, ಆರ್ಥಿಕ ಸ್ಥಿತಿಗತಿಗಳನ್ನು ನೋಡಿಕೊಂಡು ಹೊಸ ಬಸ್‍ಗಳನ್ನು ಖರೀದಿಸಲಾಗುವುದು ಎಂದ ಅವರು, ನಿಗದಿತ ಕಿಲೋಮೀಟರ್ ಸಂಚರಿಸಿದ ಬಸ್‍ಗಳನ್ನು ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಹೊಸ ಬಸ್ ಖರೀದಿ ಮಾಡಲಾಗುವುದು. ಈಗಾಗಲೇ 300 ಎಲೆಕ್ಟ್ರಿಕಲ್ ಬಸ್‍ಗಳನ್ನು ಖರೀದಿಸಲು ಜೆಬಿಸಿ ಕಂಪೆನಿಗೆ ಟೆಂಡರ್ ನೀಡಲಾಗಿದೆ ಎಂದರು.

‘ಸಾರಿಗೆ ಸಂಸ್ಥೆ ನೌಕರರಿಗೂ ನಮಗೂ ಸಂಬಂಧವಿದೆ. ನೌಕರರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಮತ್ತು ಸಾರಿಗೆ ಇಲಾಖೆ ಬದ್ಧ. ನೌಕರರ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರಕಾರ ಸಿದ್ಧ. ಆದರೆ, ರಾಜ್ಯ ರೈತ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ಅವರಿಗೂ, ನಮಗೂ ಯಾವುದೆ ಸಂಬಂಧವಿಲ್ಲ'
-ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News