ಮಾ.3ರಿಂದ ದೇವನಹಳ್ಳಿಯಿಂದ ಕಾಂಗ್ರೆಸ್ ಪಾದಯಾತ್ರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-02-25 15:31 GMT

ಬೆಂಗಳೂರು, ಫೆ. 25: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಮಾರ್ಚ್ 3ರಂದು ದೇವನಹಳ್ಳಿಯಲ್ಲಿ ಪಾದಯಾತ್ರೆ, ಸಂಜೆ ಚಿಕ್ಕಬಳ್ಳಾಪುರದಲ್ಲಿ ಚಳವಳಿ ಹಮ್ಮಿಕೊಂಡಿದ್ದೇವೆ. ಜನರ ಮಧ್ಯೆಯೇ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಸರಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಸ್ತಿ, ನೀರಿನ ಕರ ಹೆಚ್ಚಳವನ್ನು ವಿರೋಧಿಸಿ ಹೋರಾಟ ಮಾಡಲಿದ್ದೇವೆ. ನಮ್ಮ ಪಕ್ಷದ ಶಾಸಕರು ಯಾವ ಕ್ಷೇತ್ರದಲ್ಲಿ ಇಲ್ಲವೋ ಅಲ್ಲಿ ನಮ್ಮ ಹೋರಾಟ ಆರಂಭ ಮಾಡಲಿದ್ದು, ಪಕ್ಷ ಸಂಘಟನೆ, ರಾಜ್ಯ ಹಾಗೂ ಕೇಂದ್ರ ವಿರುದ್ಧ ಆಂದೋಲನ ನಡೆಸಲಾಗುವುದು ಎಂದರು.

ಬಿಬಿಎಂಪಿ ಮಾಜಿ ಮೇಯರ್ ಸಂಪತ್‍ರಾಜ್ ಯಾವ ಪ್ರಕರಣದಲ್ಲೂ ಭಾಗಿಯಾಗಿಲ್ಲ. ಡಿ.ಜೆ.ಹಳ್ಳಿ ಪ್ರಕರಣದಲ್ಲಿಯೂ ಅವರು ತಪ್ಪು ಮಾಡಿಲ್ಲ. ಯಾರು ಇದರಲ್ಲಿ ಭಾಗವಹಿಸಿದ್ದಾರೆಂಬುದು ನನಗೆ ಗೊತ್ತಿಲ್ಲ. ಇದು ಬಿಜೆಪಿ ಸರಕಾರದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿ ಎಂದು ಶಿವಕುಮಾರ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು ಪಾಲಿಕೆ ಮಹಾನಗರ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ. ನಾನು ಸಾ.ರಾ.ಮಹೇಶ್ ಅವರೊಂದಿಗೆ ಚರ್ಚಿಸಿದ್ದೆ. ಹಿಂದಿನ ಪರಂಪರೆ ಮುಂದುವರಿಸಿ ಎಂದು ಮನವಿ ಮಾಡಿದ್ದೆ. ಆದರೆ, ಮೇಯರ್ ಆಯ್ಕೆ ವಿಚಾರ ಸ್ಥಳೀಯರ ತೀರ್ಮಾನ ಎಂದು ಶಿವಕುಮಾರ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News